ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿ ಹಿರಿಯ ಶಾಸಕ ಯತ್ನಾಳ್ ನಡುವಿನ ಆಂತರಿಕ ಕಲಹ ಬಹಿರಂಗಗೊಂಡಿದ್ದು, ಇಬ್ಬರು ಪರಸ್ಪರ ಸವಾಲ್ ಎಸೆದುಕೊಂಡಿದ್ದಾರೆ. ಇದರ ಜೊತೆಗೆ ಯತ್ನಾಳ್ ಉಚ್ಚಾಟನೆ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಇದೆಲ್ಲಾ ಬೆಳವಣಿಗೆಗಳ ಮಧ್ಯೆಯೇ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ಜಾರಿ ಮಾಡಿತ್ತು.. ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇದರ ಬಗ್ಗೆ ಕೂಡಲೇ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಇದರ ಬೆನ್ನಲ್ಲೇ ಯತ್ನಾಳ್ ಬಣ ದೆಹಲಿಗೆ ಹಾರಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆತೆಸ ಯತ್ನಾಳ್ ಅವರಿಗೆ ದೆಹಲಿಯಿಂದ ಬುಲಾವ್ ಬಂದಿತ್ತು. ಸಿ.ಟಿ.ರವಿ ಕರೆ ಮಾಡಿ ಶೀಘ್ರವೇ ದೆಹಲಿಗೆ ಬರುವಂತೆ ಸೂಚಿಸಿದ್ದರು. ಇದನ್ನು ಖುದ್ದು ಯತ್ನಾಳ್ ಅವರೇ ಹೇಳಿಕೊಂಡಿದ್ದು, ಹೈಕಮಾಂಡ್ ಸೂಚನೆಗೂ ಕ್ಯಾರೇ ಎಂದಿರಲಿಲ್ಲ. ಇದೀಗ ಯತ್ನಾಳ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ದೆಹಲಿಗೆ ಹಾರಿದ್ದಾರೆ. ಹಾಗಾದರೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಸದ್ಯದ ಪ್ರಶ್ನೆ.