ಬೆಂಗಳೂರು:- ಬಾಗಿಲು ಮುಚ್ಚು, ಪ್ಲೀಸ್ ಹಾಗೆ ಹಗ್ ಮಾಡು.. ನಾನು ನಿಜ ಯಾರಿಗೂ ಹೇಳಲ್ಲ. ನೀನು ನಾನು ಹೇಳಿದ ಹಾಗೆ ಕೇಳು ಪ್ಲೀಸ್.. ಹೀಗೆ ಕಾನ್ಸ್ಟೇಬಲ್ ಓರ್ವ ಮಹಿಳಾ ಟೆಕ್ಕಿಗೆ ಕಿರುಕುಳ ಕೊಟ್ಟ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಟೆಕ್ಕಿಯ ಆರೋಪದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ. ಯುವತಿಯೊಬ್ಬರು ಇತ್ತೀಚಗೆ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಪಾಸ್ಪೋರ್ಟ್ ವೆರಿಫಿಕೇಷನ್ಗೆಂದು ಪೊಲೀಸ್ ಕಾನ್ಸ್ಟೇಬಲ್ ಕಿರಣ್ ಯುವತಿಯ ಮನೆಗೆ ತೆರಳಿದ್ದ. ಎರಡ್ಮೂರು ಬಾರಿ ಕಿರಣ್ ಯುವತಿಯ ಮನೆಗೆ ಹೋಗಿದ್ದ, ಅಲ್ಲದೆ ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.
ಪಾಸ್ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಯುವತಿಯ ಮನೆಗೆ ಬಂದ ಪೊಲೀಸ್ ಕಾನ್ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಯುವತಿ ಬಳಿ ಪೊಲೀಸ್ ಕಾನ್ಸ್ಟೇಬಲ್ ಆಗ್ರಹಿಸಿದ್ದ ಎಂದು ದೂರಲಾಗಿದೆ.
ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದರು. ನಂತರ ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್ನನ್ನು ಅಮಾನತುಗೊಳಿಸಿದ್ದಾರೆ.