ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕಟ್ಟಾ ಅನುಯಾಯಿ, ಭಾರತ ಮೂಲದ ಕಶ್ಯಪ್ ‘ಕಶ್’ ಪಟೇಲ್ ಅವರನ್ನು ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಟ್ರಂಪ್ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕಶ್ಯಪ್ ಪಾತ್ರರಾಗಿದ್ದಾರೆ.
ತಮ್ಮ ಟ್ರುಥ್ ಸೋಶಿಯಲ್ ಖಾತೆಯಲ್ಲಿ ಇದನ್ನು ಪ್ರಕಟಿಸಿರುವ ಟ್ರಂಪ್, ಭಾರತೀಯ ಮೂಲದ ಅಮೆರಿಕನ್ ಪ್ರಜೆ ಕಶ್ ಅವರು, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಎಫ್ಬಿಐಗೆ ನಿಷ್ಠೆ, ಕೆಚ್ಚು ಮತ್ತು ಸಮಗ್ರತೆಯನ್ನು ತರಲಿದ್ದಾರೆ ಎಂದು ಬಣ್ಣಿಸಿದ್ದಾರೆ.
“ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ. ಕಶ್ ಒಬ್ಬರು ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕ ಮೊದಲು ಎಂಬ ಭಾವನೆಯನು ಹೊಂದಿದವರು. ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ, ನ್ಯಾಯ ಸಂರಕ್ಷಣೆಯಲ್ಲಿ ಮತ್ತು ಅಮೆರಿಕದ ಜನರನ್ನು ರಕ್ಷಿಸುವಲ್ಲಿ ತಮ್ಮ ಇಡೀ ವೃತ್ತಿಜೀವನವನ್ನು ಸವೆಸಿದವರು. ರಷ್ಯಾ ಹುಸಿ ಬೆದರಿಕೆ ಅನಾವರಣ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದು. ಸತ್ಯದ ಪರ ವಕೀಲರಾಗಿ, ಬದ್ಧತೆ ತ್ತು ಸಂವಿಧಾನದ ಪರವಾಗಿ ಸದಾ ನಿಂತವರು. ನನ್ನ ಮೊದಲ ಅವಧಿಯಲ್ಲಿ ಕಶ್ ರಕ್ಷಣಾ ವಿಭಾಗದ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರಾಗಿ ಮತ್ತು ಭಯೋತ್ಪಾದೆ ವಿರೋಧಿ ವಿಭಾಗದ ಹಿರಿಯ ನಿರ್ದೇಶಕರಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ನಂಬಲಸಾಧ್ಯ ಕೆಲಸ ಮಾಡಿದ್ದಾರೆ” ಎಂದು ಕಶ್ ಅವರನ್ನು ಟ್ರಂಪ್ ಹೊಗಳಿದ್ದಾರೆ.
ಬರಾಕ್ ಒಬಾಮಾ ಅವರ ಅವಧಿಯಲ್ಲಿ ನ್ಯಾಯ ವಿಭಾಗದಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದ ಕಶ್ ಪಟೇಲ್ ಅವರು ಎರಡು ವರ್ಷಗಳ ಕಾಲ ಡೆವಿನ್ ನ್ಯೂನ್ಸ್, ಆರ್-ಕ್ಲಿಫ್ ಪರ ಹಿರಿಯ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2017 ಮತ್ತು 2018ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಎಫ್ಬಿಐ ರಷ್ಯಾ ತನಿಖೆಗೆ ನೆರವಾಗಿದ್ದರು. ಇದೀಗ ಟ್ರಂಪ್ ಸರ್ಕಾರದಲ್ಲಿ ಎಫ್ಬಿಐ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.