ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ಮಿಲಿಟರಿ ಪಡೆ ನಡೆಸಿದ ದಾಳಿಯಲ್ಲಿ ಕನಿಷ್ಠ 15 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾದ ವೈದ್ಯಕೀಯ ಇಲಾಖೆ ಮಾಹಿತಿ ನೀಡಿದೆ.
ಗಾಝಾ ನಗರದಲ್ಲಿ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದ ಅಲ್-ತಬೀಯನ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಹಮಾಸ್ನ ಮಾಜಿ ವಕ್ತಾರ ಫೌಜಿ ಬರ್ಹಮ್ ಅವರ ಇಬ್ಬರು ಮಕ್ಕಳು ಸೇರಿದಂತೆ 8 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ.
ಗಾಝಾ ನಗರದ ಶೆಜೈಯಾ ಉಪನಗರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 4 ಮಂದಿ, ಉತ್ತರ ಗಾಝಾದ ಬೀಟ್ ಲಾಹಿಯಾದಲ್ಲಿ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.