ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕಾರು ಸ್ಫೋಟಿಸುವ ಬೆದರಿಕೆ
ಕಲಬುರಗಿ : ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ. ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಆಡಿಯೋ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಾರು ಸ್ಫೋಟದ ಮೂಲಕ ಅನಿತಾ ಹತ್ಯೆಗೆ ಸಂಚು ಹೂಡಲಾಗಿದೆಯೇ ಎಂಬ ಅನುಮಾನ ಮೂಡಿದೆ.
ಕಲಬುರಗಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಮೊಬೈಲ್ಗೆ ಅಪರಿಚಿನತ ಆಡಿಯೋ ಸಂದೇಶ ಬಂದಿದೆ. ಸದ್ಯ ಪೊಲೀಸ್ ಇನ್ಸ್ಪೆಕ್ಟರ್ ಆಡಿಯೋ ಬೆದರಿಕೆ ಸಂದೇಶದ ಬಗ್ಗೆ ಸೂಪರಿಂಟೆಂಡೆಂಟ್ ಗಮನಕ್ಕೆ ತಂದಿದ್ದಾರೆ. ಇದೀಗ ಬೆದರಿಕೆ ಸಂದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅನಿತಾ, ಸಿಸಿಟಿವಿ ಕಣ್ಗಾವಲಿನಲ್ಲೇ ಕಾರು ಪಾರ್ಕ್ ಮಾಡುವಂತೆ ಸೂಚನೆ ನೀಡಿದ್ದಾರೆ. ಜೈಲಿನ ಬಳಿ ಹಾಗೂ ಇತರೆಡೆಗಳಲ್ಲಿ ಎಲ್ಲೇ ಆದರೂ ಸಿಸಿಟಿವಿ ಇರುವ ಕಡೆ ಕಾರು ಪಾರ್ಕಿಂಗ್ ಮಾಡಲು ಸೂಚನೆ ನೀಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೆ ಅನಿತಾ ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದು, ಅವರು ಅಧಿಕಾರ ಸ್ವೀಕಾರ ಮಾಡಿದ ದಿನವೇ ಜೈಲಿನಲ್ಲಿ ಕೈದಿಗಳು ಹೈಫೈ ಜೀವನ ನಡೆಸುತ್ತಿರುವುದು ಅನಾವರಣವಾಗಿತ್ತು. ಕಾರಾಗೃಹ ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿ ಕ್ರಮಗಳನ್ನು ಕೈಗೊಂಡಿತ್ತು. ಬಳಿಕ ಅನಿತಾ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದರು.