ಬೆಂಗಳೂರು: ಕೆಪಿಎಸ್ಸಿ ಸಂಸ್ಥೆಯಿಂದ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಅನ್ಯಾಯವಾಗಯತ್ತಲೇ ಇದ್ದು, ಈ ಸಂಸ್ಥೆಯನ್ನು ರದ್ದು ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಕೆ ಹನುಮಾಪುರ ಆಗ್ರಹಿಸಿದ್ದಾರೆ.
ನಗರದ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡ-ಇಂಗ್ಲಿಷ್ ಭಾಷಾಂತರದಲ್ಲಿ ಪ್ರಶ್ನೆಗಳೇ ತಪ್ಪಾಗಿದ್ದವು. ಇದನ್ನು ವಿರೋಧಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ ಬಳಿಕ ನಡೆದಿದ್ದ ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಹೇಳಿತ್ತು.
ಡಿಸೆಂಬರ್ 29 ರಂದು ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿತ್ತು. ಹೊಸದಾಗಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಲ್ ಟಿಕೆಟ್ ಡೌನ್ ಲೋಡ್ ಮಾಡಲು ಹೋದಾಗ ಹಾಲ್ ಟಿಕೆಟ್ ಮತ್ತು ನೋಟಿಫಿಕೇಷನ್ ಅನ್ನು ಕೆಪಿಎಸ್ಸಿ ಡಿಲೀಟ್ ಮಾಡಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ವಿದ್ಯಾರ್ಥಿನಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದು, ಈಗಾಗಲೇ ಬರೆಸಿರುವ ಪರೀಕ್ಷೆಯನ್ನೇ ಮಾನ್ಯ ಮಾಡಲಿ, ಹೊಸದಾಗಿ ಪರೀಕ್ಷೆ ಬರೆಸುವುದು ಬೇಡ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಹೈಕೋರ್ಟ್ ಸ್ಟೇ ನೀಡಿದೆ. ಈ ವಿಚಾರವಾಗಿ ಮುಂದಿನ ತಿಂಗಳು 9ನೇ ತಾರೀಖು ವಿಚಾರಣೆ ನಡೆಯಲಿದೆ.
Pregnancy Age: ಮಗು ಪಡೆಯಲು ಸೂಕ್ತವಾದ ವಯಸ್ಸು ಯಾವುದು.? ಮಹಿಳೆಯರು-ಪುರುಷರಿಗೆ ವೈದ್ಯರು ನೀಡೋ ಸಲಹೆ ಏನು.?
ಇಷ್ಟೆಲ್ಲಾ ಪ್ರಕ್ರಿಯೆಗಳು ಆಗಿದ್ದರೂ ಕೂಡ, ಸಚಿವ ಎಚ್ ಕೆ ಪಾಟೀಲ್ ಅಥವಾ ಸರ್ಕಾರ ತಮ್ಮ ಜವಾಬ್ದಾರಿಯನ್ನು ಮರೆತಿರುವಂತಿದೆ. 29ನೇ ತಾರೀಖು ಪರೀಕ್ಷೆ ನಿಗದಿಯಾಗಿದ್ದರೂ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಯಾವುದೇ ಕ್ರಮಗಳನ್ನು ಕೈಗೊಳ್ಳದೆಯೇ ಹಾಲ್ ಟಿಕೆಟ್ ರದ್ದು ಮಾಡುವ ಮೂಲಕ ಪರಿಕ್ಷಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ್ದಾರೆ. ಇದರಿಂದ ಲಕ್ಷಾಂತರ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಕುರಿತು ಗೊಂದಲಗಳು ಮೂಡಿವೆ. 29ನೇ ತಾರೀಖು ಪರೀಕ್ಷೆ ಬಗ್ಗೆ ಪರೀಕ್ಷಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿ. ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಯುವ ಘಟಕವು ಉಗ್ರ ಹೋರಾಟ ನಡೆಸಲಿದೆ ಎಂದರು.
ಆಮ್ ಆದ್ಮಿ ಪಾರ್ಟಿ ಯಶವಂತಪುರ ಯುವ ಘಟಕದ ಅಧ್ಯಕ್ಷ ಜನಾರ್ಧನ್ ಮಾತನಾಡಿ, ಕೆಪಿಎಸ್ಸಿ ಪರೀಕ್ಷೆಗಳಿಂದ ವಂಚಿತರಾದವರಲ್ಲಿ ನಾನೂ ಒಬ್ಬನಾಗಿದ್ದೇನೆ. ಕೆಪಿಎಸ್ಸಿ ಮತ್ತು ಸರ್ಕಾರದ ಗೊಂದಲಗಳಿಂದಾಗಿ ಹಲವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.