ಬಿಗ್ ಬಾಸ್ ಸೀಸನ್ 11ರಲ್ಲಿ ಮನೆ ರಣರಂಗವಾಗಿದೆ. ಸದ್ಯ ಒಂಬತ್ತನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ ಟಾಸ್ಕ್ನ ಕಾವು ಏರುತ್ತಿದೆ. ಕಳೆದ ವೀಕೆಂಡ್ನಲ್ಲೇ ಕಿಚ್ಚ ಸುದೀಪ್ ಅವರು ಮುಂದಿನ ವಾರದಿಂದ ಕಠಿಣ ಟಾಸ್ಕ್ಗಳು ಪ್ರಾರಂಭ ಆಗುತ್ತವೆ ಎಂದಿದ್ದರು. ಇದೀಗ ದೊಡ್ಮನೆಯಲ್ಲಿ ನಾಮಿನೇಷನ್ ಫೀವರ್ ಶುರುವಾಗಿದ್ದು ಸ್ಪರ್ಧಿಗಳ ಮಧ್ಯೆ ವಾಕ್ ಸಮರ ಜೋರಾಗಿಯೇ ನಡೆಯುತ್ತಿದೆ.
ನಾಮಿನೇಷನ್ ಮಾಡುವ ಸಂದರ್ಭ ಚೈತ್ರಾ ಕುಂದಾಪುರ ಹಾಗೂ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟ ರಜತ್ ಕಿಶನ್ ನಡುವೆ ಮಾತಿನ ಸಮರ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಬಾಸ್ ಪದ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಅವರು, ‘ರಜತ್ ಪ್ರತಿ ಬಾರಿ ಬಾಸ್, ಬಾಸ್ ಅಂದಾಗ ಅದರಲ್ಲೊಂದು ವ್ಯಂಗ್ಯ ಕಾಣುತ್ತೆ. ಮನೆಯಿಂದ ಹೊರಗಡೆ ಹೋಗೋದಕ್ಕೆ ರೆಡಿ ಆಗಿದ್ದೀನಿ ಅಂತ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಚೈತ್ರಾ ಅವರ ಮಾತಿಗೆ ತಿರುಗೇಟು ಕೊಟ್ಟ ರಜತ್, ‘ಈವಾಗಲೂ ಹೇಳ್ತೀನಿ ನಮ್ಮ ಬಾಸ್ ಇವರು. ಬರೀ ಬಾಸ್ ಅಂದಿದ್ದಕ್ಕೆ ಮನೆಯಿಂದ ಆಚೆ ಕಳುಹಿಸುತ್ತಾರಂತೆ ಅದಕ್ಕೆ ನಮ್ಮ ಬಾಸ್ ಇವ್ರು. ಬಾಸ್ ನಾನು ಈಗಲೂ ಹೇಳುತ್ತೇನೆ ಕೇಳಿಸಿಕೊಳ್ಳಿ. ನಿಮ್ಮನ್ನ ಮನೆಯಿಂದ ಹೊರಗೆ ಕಳುಹಿಸೋವರೆಗೂ ನಾನು ಹೋಗಲ್ಲ ಬಾಸ್’ ಎಂದು ನೇರವಾಗಿ ಹೇಳಿದ್ದಾರೆ.
ಕಳೆದ ಶನಿವಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಮನೆಯ ಸದಸ್ಯರ ಬಗ್ಗೆ ಮಾತನಾಡುತ್ತಿದ್ದ ರಜತ್ ಅವರು, ಚೈತ್ರಾ ಅವರನ್ನು ಬಾಸ್ ಎಂದು ಸಂಭೋಧಿಸುತ್ತಿದ್ದರು. ಅದಕ್ಕೆ ಮುಂಚೆ ಅವರು ಜೈಲಿಗೆ ಹೋದಾಗಲೂ ಚೈತ್ರಾ ಅವರನ್ನು ಬಾಸ್ ಎಂದೇ ಹೇಳಿತ್ತಿದ್ದರು. ಆಗಂತೂ ಮನೆಯ ಕೆಲ ಸ್ಪರ್ಧಿಗಳಿಗೆ ರಜತ್ ಯಾವ ಬಾಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅನುಮಾನವೂ ಮೂಡಿತ್ತು. ಸದ್ಯ ಇಬ್ಬರ ನಡುವೆ ವಾಕ್ ಸಮರ ಜೋರಾಗಿದ್ದು ಈ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಎಂಬ ಕುತೂಹಲ ಶುರುವಾಗಿದೆ.