ಹಣ ಎಷ್ಟ್ರಿದ್ರು ಸಾಲನ್ನು. ಇನ್ನೂ ಬೇಕು, ಮತ್ತೆ ಬೇಕು ಅನ್ನಿಸೋಕೆ ಶುರುವಾಗಿದೆ. ಹಣ ಅನ್ನೋದು ಮನುಷ್ಯನ ಕೈಯಿಂದ ಎಂಥ ತಪ್ಪು ಕೆಲಸ ಬೇಕಾದ್ರು ಮಾಡಿಸುತ್ತೆ. ಆದರೆ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಇದ್ರು ಈ ಯುವಕ ಮಾತ್ರ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿರೋದು ಮಲೆಷ್ಯಾಯದಲ್ಲಿ.
45,339 ಕೋಟಿ ರೂ. ಸಂಪತ್ತು ಹೊಂದಿರುವ ಮಲೇಷ್ಯಾದ ಉದ್ಯಮಿ ಆನಂದ್ ಕೃಷ್ಣನ್ರ ಏಕೈಕ ಪುತ್ರ ವೆನ್ ಆಜಾನ್ ಸಿರಿಮಾನ್ಯೊ ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ಮೂಲಕ ಕೋಟಿ ಕೋಟಿ ಆಸ್ತಿ ತೊರೆದು ಅಚ್ಚರಿ ಮೂಡಿಸಿದ್ದಾರೆ.
ಜಗತ್ತಿನ ಕೆಲವೇ ಕೆಲವು ಶ್ರೀಮಂತರ ಪಟ್ಟಿಯಲ್ಲಿ ಆನಂದ್ ಕೃಷ್ಣನ್ ಕೂಡ ಒಬ್ಬರು. ಮಲೇಷ್ಯಾದ 3ನೇ ಶ್ರೀಮಂತ ಆನಂದ್ ಕೃಷ್ಣನ್ರ ಮಗ ವೆನ್ ಆಜಾನ್ ಸಿರಿಮಾನ್ಯೊ ಬರೋಬ್ಬರಿ 45 ಸಾವಿರ ಕೋಟಿ ಮೌಲ್ಯದ ಸಂಪತ್ತನ್ನೇ ತೊರೆದು ತಮ್ಮ 18ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಮಲೇಷ್ಯಾದಲ್ಲಿ ಎಕೆ ಎಂದೇ ಹೆಸರಾಗಿರುವ ಉದ್ಯಮಿ ಆನಂದ್ ಕೃಷ್ಣನ್ ಹಲವು ಕ್ಷೇತ್ರಗಳಲ್ಲಿ ತಮ್ಮ ಉದ್ಯಮ ಬೆಳೆಸಿದ್ದವರು. ದೂರ ಸಂಪರ್ಕ, ಮಾಧ್ಯಮ, ತೈಲ & ಅನಿಲ, ರಿಯಲ್ ಎಸ್ಟೇಟ್ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲೂ ತಮ್ಮ ವ್ಯಾಪಾರ ವಿಸ್ತರಿಸಿದವರು. ಟೆಲಿಕಾಂ ಕ್ಷೇತ್ರದಲ್ಲಿ ತಮ್ಮ ಹೆಗ್ಗುರುತು ಮೂಡಿಸಿದವರು.
ಆನಂದ್ ಕೃಷ್ಣನ್ ಅವರ ಕಂಪನಿ ಏರ್ಸೆಲ್, ಭಾರತದ ಪ್ರಮುಖ ದೂರಸಂಪರ್ಕ ಕಂಪನಿ. ಅಲ್ಲದೇ ಒಂದು ಕಾಲಕ್ಕೆ ಚೆನ್ನೈ ಸೂಪರ್ ಕಿಂಗ್ಸ್ನ ಪ್ರಾಯೋಜಕರೂ ಕೂಡ ಆಗಿದ್ದವರು. ಸುಮಾರು 9 ಕಂಪನಿಗಳಲ್ಲಿ ಅಪಾರ ಹೂಡಿಕೆ ಮಾಡಿರುವ ಆನಂದ್ ಕೃಷ್ಣನ್, ಬೌದ್ಧ ಧರ್ಮಕ್ಕೆ ಸೇರಿದವರು. ಹಲವು ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿರುವ ಆನಂದ್ ಕೃಷ್ಣನ್ ಬೌದ್ಧ ಧರ್ಮ, ಶಿಕ್ಷಣ, ಮಾನವೀಯ ಕಾರ್ಯಗಳಿಗೆ ಧನ ಸಹಾಯ ಮಾಡುತ್ತಾರೆ.
ಇಂತಹ ಉದ್ಯಮಿ, ತಮ್ಮ ಏಕೈಕ ಪುತ್ರ ವೆನ್ ಅಜಾನ್ ಸಿರಿಪಾನ್ಯೋ ಅನುವಂಶಿಕವಾಗಿ ತಮ್ಮ ಉದ್ಯಮ ಬೆಳೆಸುತ್ತಾನೇ ಎಂದೇ ನಂಬಿದ್ದರು. ಆದರೆ ಆದದ್ದೇ ಬೇರೆ. ಲಂಡನ್ನಲ್ಲಿ ತನ್ನ ಇಬ್ಬರು ಸಹೋದರಿಯೊಂದಿಗೆ ಬೆಳೆದ ಸಿರಿಪಾನ್ಯೋ ಅಸಾಧಾರಣ ಭಾಷಾ ಸಾಮರ್ಥ್ಯ ಹೊಂದಿದ್ದಾರೆ. 8 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕೋಟಿ ಡಾಲರ್ ಸಂಪತ್ತು ತೊರೆದು ಸನ್ಯಾಸತ್ವ ಸ್ವೀಕರಿಸುವ ಅವರ ನಿರ್ಧಾರ ಇಡೀ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.
ಒಮ್ಮೆ ಸಿರಿಪಾನ್ಯೋ ಥೈಲ್ಯಾಂಡ್ಗೆ ಭೇಟಿ ನೀಡಿದಾಗ ಅವರು ಬೌದ್ಧ ಸನ್ಯಾಸತ್ವದೆಡೆಗೆ ಆಕರ್ಷಿತರಾದರು. ಅಲ್ಲಿ ಅವರು ತಾತ್ಕಾಲಿಕ ದೀಕ್ಷೆ ಪಡೆದರು. ಅಲ್ಪಾವಧಿಯ ಸನ್ಯಾಸತ್ವದ ದೀಕ್ಷೆ ಅವರನ್ನು ಸಂಪೂರ್ಣ ಆಧ್ಯಾತ್ಮಿಕ ಜೀವನದತ್ತ ನಡೆಯುವಂತೆ ಮಾಡಿತು.
ಕಳೆದ 2 ದಶಕಗಳಿಂದ ಸಿರಿಪಾನ್ಯೋ ಸನ್ಯಾಸತ್ವ ಜೀವನಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಸದ್ಯ ಥಾಯ್ಲ್ಯಾಂಡ್ನ ಮ್ಯಾನ್ಮಾರ್ ಗಡಿಯಲ್ಲಿರುವ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ. ಸಿರಿಪಾನ್ಯೋ ಥೇರವಾಡ ಬೌದ್ಧ ಸಂಪ್ರದಾಯವನ್ನು ಅನುಸರಿಸುತ್ತಾರೆ. ಮಿಲಿಯನ್ ಡಾಲರ್ ವ್ಯವಹಾರ ಮುನ್ನಡೆಸುವ ಬದಲು ಕಳೆದ 20 ವರ್ಷಗಳಿಂದ ಸರಳವಾಗಿ ಸನ್ಯಾಸತ್ವ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಅನುಯಾಯಿಗಳಿಗೆ ಶಾಂತಿ, ಸಾವಧಾನತೆ, ಆಂತರಿಕ ಶಾಂತಿಯನ್ನು ಬೋಧಿಸುತ್ತಾರೆ. ಅವರ ಸನ್ಯಾಸಿ ಜೀವನದ ಹೊರತಾಗಿಯೂ ತಮ್ಮ ತಂದೆಯನ್ನು ಆಗಾಗ ಭೇಟಿಯಾಗುತ್ತಾರೆ. ಸಿರಿಪಾನ್ಯೋ ತಾಯಿ ಥಾಯ್ಲೆಂಡ್ನ ಮೊಮ್ವಜಾರೊಂಗ್ಸೆ ಸುಪ್ರಿಂದಾ ಚಕ್ರಬನ್ ಅವರು ಥಾಯ್ಲೆಂಡ್ನ ರಾಜಮನೆತನದವರಾಗಿದ್ದಾರೆ. ಸಿರಿಪಾನ್ಯೋ ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.