ಹುಬ್ಬಳ್ಳಿ : ಭಾರತದ ಸಂವಿಧಾನಕ್ಕೆ ಈವರೆಗೆ ಆಗಿರುವ 106 ತಿದ್ದುಪಡಿಗಳಲ್ಲಿ 71 ತಿದ್ದುಪಡಿಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ವಾದಿರಾಜ ಹೇಳಿದರು.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿಂದು ಆಯೋಜಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
DK Shivakumar: ಸಂವಿಧಾನವನ್ನೇ ಕಿತ್ತು ಹಾಕುತ್ತೇವೆ ಎಂದವರನ್ನ ಜನತೆ ಕಿತ್ತಾಕಿದರು: ಬಿಜೆಪಿಗೆ ಡಿಕೆಶಿ ಟಾಂಗ್!
ಸಂವಿಧಾನದ ಮೂಲ ಆಶಯವನ್ನೇ ದಿಕ್ಕು ತಪ್ಪಿಸಿದ ಕಾಂಗ್ರೆಸ್ ಸರ್ಕಾರ, 45 ವರ್ಷ ಒಂದೇ ಕುಟುಂಬಕ್ಕೆ ಆಡಳಿತ ನಡೆಸುವ ಅಧಿಕಾರ ನೀಡಿತು ಎಂದರು. ಸಂವಿಧಾನಕ್ಕೆ ಆಗಿರುವ 106 ತಿದ್ದುಪಡಿಗಳ ಪೈಕಿ ಕೇವಲ 31 ತಿದ್ದುಪಡಿಯನ್ನು ಕಾಂಗ್ರೆಸೇತರ ಸರ್ಕಾರಗಳು ಮಾಡಿದ್ದವು. ಬಹುಪಾಲು ತಿದ್ದುಪಡಿ ಮಾಡಿಕೊಂಡಿದ್ದ ಕಾಂಗ್ರೆಸ್, ತನ್ನ ಸ್ವಾರ್ಥಕ್ಕಾಗಿ ಸಂವಿಧಾನ ಅಮಾನತ್ತು ಮಾಡಲು ಹೊರಟಿತ್ತು ಎಂದು ದೂರಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಅಹಿಂಸಾತ್ಮಕ ಹೋರಾಟ ನಡೆಸಿದ್ದರು. ಆದರೆ, ಪಠ್ಯ ಪುಸ್ತಕಗಳಲ್ಲಿ ಮಹಾತ್ಮಾ ಗಾಂಧೀಜಿ ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಹೋರಾಟಗಾರರ ಬಗ್ಗೆ ಮಾಹಿತಿ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತದ ಸಂವಿಧಾನ ಯಾವುದೇ ದೇಶದ ನಕಲು ಪ್ರತಿಯಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಹಲವಾರು ಅಡೆತಡೆಗಳನ್ನು ಎದುರಿಸಿ, ಮೂರು ವರ್ಷಗಳಲ್ಲಿ 300ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ಸಂವಿಧಾನ ರಚಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು.
ಜನಸಂಘದವರಾದ ಶ್ಯಾಮಪ್ರಕಾಶ ಮುಖರ್ಜಿ ಅವರು ಸಂವಿಧಾನ ರಚನೆಗೆ ಹೋರಾಡಿ, ಪ್ರಾಣ ಬಿಟ್ಟರು. ಅವರ ಹೋರಾಟದ ಫಲವಾಗಿಯೇ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನ ಪಾಲನೆಯಾಗುತ್ತಿದೆ. ಇದರ ಬಗ್ಗೆ ತಿಳಿವಳಿಕೆ ಇಲ್ಲದ ಕಾಂಗ್ರೆಸ್, ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಅವಧಿಯಲ್ಲಿಯೂ ಸಂವಿಧಾನಕ್ಕೆ ಹಲವು ತಿದ್ದುಪಡಿಗಳಾಗಿವೆ. ಆದರೆ, ಅವೆಲ್ಲ ಪ್ರಜಾಪ್ರಭುತ್ವದ ಉಳಿವಿಗೆ, ದೇಶದ ಜನರಿಗಾಗಿಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಹಲವಾರು ಅಡೆತಡೆಗಳನ್ನು ಎದುರಿಸಿ ಸಂವಿಧಾನ ರಚಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಗೌರವ ನೀಡುವ ಉದ್ದೇಶದಿಂದ ಬೂತ್ ಮಟ್ಟದಲ್ಲಿ ಸಂವಿಧಾನದ ಸನ್ಮಾನ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದ್ದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿದರು. ಬಿಜೆಪಿ ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ವಿನಾಯಕ ಚಿಕ್ಕಮಠ, ಮಹಾಂತೇಶ ಶ್ಯಾಗೋಟಿ, ಶಿವಾಜಿ ಡೊಳ್ಳಿನ, ರಾಜೇಶ್ವರಿ ಸಾಲಗಟ್ಟಿ ಹಾಗೂ ಇತರರು ಇದ್ದರು