ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ 2020ರ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಚುನಾವಣೆ ಬಳಿಕದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಅಮೆರಿಕ ನ್ಯಾಯಾಲಯ ವಜಾಗೊಳಿಸಿದೆ.
ಟ್ರಂಪ್ ವಿರುದ್ಧ ಈ ಸಂಬಂಧ ಎರಡು ಪ್ರಕರಣಗಳ ತನಿಖೆ ಕೈಬಿಡಬೇಕು ಎಂದು ಕೋರಿ ಅಭಿಯೋಜಕರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಹಾಲಿ ಅಧ್ಯಕ್ಷರ ವಿರುದ್ಧ ತನಿಖೆ ನಡೆಸುವುದನ್ನು ನಿಷೇಧಿಸುವುದು ನ್ಯಾಯಾಂಗ ಇಲಾಖೆಯ ನೀತಿಯಾಗಿರುವುದರಿಂದ ಪ್ರಕರಣ ಕೈಬಿಡುವಂತೆ ಮನವಿ ಮಾಡಲಾಗಿತ್ತು.
2020ರ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ 2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಭವನದ ಮೇಲೆ ನಡೆಸಿದ ದಾಳಿಗೆ ಟ್ರಂಪ್ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಎರಡೂ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದ ವಿಶೇಷ ಅಭಿಯೋಜಕ ಜ್ಯಾಕ್ ಸ್ಮಿತ್ ಅವರು, ಚುನಾವಣೆ ಸಂಬಂಧಿತ ಪ್ರಕರಣಗಳನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಜತೆಗೆ 2021ರಲ್ಲಿ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ವರ್ಗೀಕೃತ ದಾಖಲೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ ಎಂಬ ಪ್ರಕರಣ ವಜಾಗೊಳಿಸುವಂತೆಯೂ ಕೋರಿದ್ದರು.