ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್, ಬಾಬಿ ಡಿಯೋಲ್ ಮುಂತಾದವರು ನಟಿಸಿದ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಸಾಕಷ್ಟು ಆಕ್ಷೇಪಾರ್ಹ ದೃಶ್ಯಗಳು ಇದ್ದರು ಕಲೆಕ್ಷನ್ ನಲ್ಲಿ ಮಾತ್ರ ಸಿನಿಮಾ ಹಿಂದೇಟು ಹಾಕಿರಲಿಲ್ಲ. ಸುಮಾರು 900 ಕೋಟಿ ಕಲೆಕ್ಷನ್ ಮಾಡಿದ್ದ ಅನಿಮಲ್ ಸಿನಿಮಾದ ವಿರುದ್ಧ ಇದೀಗ ಗೀತರಚನಕಾರ ಜಾವೇದ್ ಅಖ್ತರ್ ಗುಡುಗಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನಿಮಲ್ ಸಿನಿಮಾದ ಬಗ್ಗೆ ಮಾತನಾಡಿರುವ ಜಾವೇದ್ ಅಖ್ತರ್, ‘ಅನಿಮಲ್’ ರೀತಿಯ ಕಥೆ ಇರುವ ಸಿನಿಮಾವನ್ನು ಮಾಡುವವರನ್ನು ವಿಕೃತ ಮನಸ್ಸಿನವರು ಎಂದಿದ್ದಾರೆ. ಪ್ರೇಕ್ಷಕರು ಅಂತಹ ಸಿನಿಮಾವನ್ನು ನೋಡಿ ಗೆಲ್ಲಿಸುವುದು ಅದಕ್ಕಿಂತಲೂ ದೊಡ್ಡ ದುರಂತ ಎಂದು ಅಭಿಪ್ರಾಯಪಟ್ಟಿದ್ದಾರೆ.
‘12ರಿಂದ 15 ಜನರು ಸೇರಿಕೊಂಡು ಕೆಟ್ಟ ಮೌಲ್ಯಗಳು ಇರುವ ಸಿನಿಮಾವನ್ನು ಮಾಡಿದರೆ ಅಥವಾ ಅಶ್ಲೀಲವಾದ ಒಂದು ಹಾಡನ್ನು ಮಾಡಿದರೆ ಅದು ದೊಡ್ಡ ಸಮಸ್ಯೆ ಅಲ್ಲ. 140 ಕೋಟಿ ಜನರಲ್ಲಿ 10 ಅಥವಾ 12 ಜನರು ವಿಕೃತ ಮನಸ್ಸಿನವರಾದರೆ ಪರವಾಗಿಲ್ಲ. ಆದರೆ ಅಂಥ ಸಿನಿಮಾ ಸೂಪರ್ ಹಿಟ್ ಆದರೆ ಅದು ನಿಜಕ್ಕೂ ಸಮಸ್ಯೆ’ ಎಂದು ಜಾವೇದ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯವರಿಗೆ ಅಗೌರವ ತೋರಿಸುವಂತಹ ದೃಶ್ಯಗಳು ‘ಅನಿಮಲ್’ ಸಿನಿಮಾದಲ್ಲಿ ಇವೆ. ಕೆಟ್ಟ ಸಂಭಾಷಣೆ ಇದೆ. ತನ್ನ ಬೂಟು ನೆಕ್ಕು ಎಂದು ಮಹಿಳಾ ಪಾತ್ರಕ್ಕೆ ಕಥಾನಾಯಕ ಹೇಳುವಂತಹ ದೃಶ್ಯ ಇದೆ. ಅಲ್ಲದೇ ಕ್ರೌರ್ಯ ಕೂಡ ಮಿತಿ ಮೀರಿದೆ ಎಂಬ ಕಾರಣಕ್ಕೆ ಹಲವರು ಈ ಸಿನಿಮಾವನ್ನು ತೆಗಳಿದ್ದಾರೆ. ಆದರೆ ಈ ಟೀಕೆಯನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಒಪ್ಪಿಕೊಂಡಿಲ್ಲ. ಅವರು ತಮ್ಮ ಸಿನಿಮಾವನ್ನು ಸಮರ್ಥನೆ ಮಾಡಿಕೊಳ್ಳುತ್ತಲೇ ಬರುತ್ತಿದ್ದಾರೆ. ಇದೀಗ ಜಾವೇದ್ ಅಖ್ತರ್ ಹೇಳಿಕೆಗೆ ಸಂದೀಪ್ ರೆಡ್ಡಿ ವಂಗಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ.