ಬೆಂಗಳೂರು: ‘ಶಕ್ತಿ ಪೀಠ’ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರಿನ ಚಾಮುಂಡಿ ಸನ್ನಿಧಿ ಭಕ್ತರ ಮನಸ್ಸಿನಲ್ಲಿ ಪವಿತ್ರ ಸ್ಥಾನವನ್ನು ಪಡೆದುಕೊಂಡಿದೆ. ಆದ್ದರಿಂದಲೇ ಮುಖ್ಯಮಂತ್ರಿಗಳು ಮೈಸೂರಿನ ನಾಡದೇವಿ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸಲು ಆದೇಶಿಸಿದ್ದಾರೆ.
ಹೌದು ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಹಿನ್ನೆಲೆ ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ.
ಸಿಎಂ ಈ ಆದೇಶ ಮಾಡಿದ್ದಾರೆ. ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬ ಭಕ್ತರ, ಬೇಡಿಕೆಯನ್ನು ಅರಿತು, ಸಂಕಲ್ಪ ಮಾಡಿಕೊಂಡು ಪ್ರಯತ್ನಿಸಲಾಗಿತ್ತು. ಸಿಎಂ ಆದೇಶದಿಂದ ಈಗ ಆ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತಾಗಿದೆ.
ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆಯಾಗಿದ್ದಾಳೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿಯಾಗಿದ್ದಾಳೆ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ” ಎಂದು ದಿನೇಶ್ ಗೂಳಿಗೌಡ ಸಿಎಂಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.