ಬೆಂಗಳೂರು:- ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಷಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಹಿನ್ನೆಲೆ, ರಾಜ್ಯಾಧ್ಯಕ್ಷರ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಎದ್ದಿದೆ.
ಈ ಬಗ್ಗೆ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದ್ದು, ಈ ಸೋಲಿಗೆ ಪಕ್ಷವೇ ಜವಾಬ್ದಾರಿ ಹೊರಲಿದೆ. ಪಕ್ಷವು ಇದನ್ನು ಸವಾಲಾಗಿ ತೆಗೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿಗರು ವಾಮಮಾರ್ಗ, ವಕ್ರ ಮಾರ್ಗ, ಹಣವನ್ನು ಹರಿಸುವ ಮೂಲಕ ಜಾತಿ ವಿಷಬೀಜವನ್ನು ಬಿತ್ತಿ, ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಒಗ್ಗಟ್ಟು ಮಾಡಿ, ಮುಖ್ಯಮಂತ್ರಿಗಳು ತಾನು ಸಿಎಂ ಆಗಿ 5 ವರ್ಷ ಇರಬೇಕೋ ಬೇಡವೋ ಎಂದು ಮಂತ್ರಿಗಳಿಗೆ, ಶಾಸಕರಿಗೆ ಕೇಳಿ, ಭಯವನ್ನುಂಟು ಮಾಡಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಗೆದ್ದಿದ್ದಾರೆ. ಎನ್ಡಿಎ 3 ಸೀಟುಗಳನ್ನು ಸೋತಿದೆ. ಸೋಲಿನ ಅವಲೋಕನ ಮಾಡಿ ಬಿಜೆಪಿಯನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿ ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರ ಮತಗಳೂ ಬಹಳ ದೊಡ್ಡ ಪ್ರಮಾಣದಲ್ಲಿ ಇದೆ. ನಮಗೆ ಬರುವ ಮತಗಳು ಸ್ವಲ್ಪ ಮಟ್ಟಿಗೆ ವಿಭಜನೆಯಾಗಿವೆ. ಅದರಲ್ಲಿ ಹಣವನ್ನು ಹರಿಸಿದ್ದಾರೆ, ವಾಮಮಾರ್ಗವಾಗಿ ಕೆಲಸ ಮಾಡಿದ್ದಾರೆ, ಸಚಿವರು ಬೀಡು ಬಿಟ್ಟಿದ್ದಾರೆ, ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕರನ್ನು ನೇಮಿಸಿದ್ದರು. ಪಕ್ಷ ಎಂದ ಮೇಲೆ ಸಣ್ಣಪುಟ್ಟ ಗೊಂದಲಗಳಿರುತ್ತವೆ. ಇವನ್ನು ನಾವು ಸರಿಪಡಿಸಿ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಪುನಃ ಒಳ್ಳೆಯ ರೀತಿಯಲ್ಲಿ ಕಟ್ಟುತ್ತೇವೆ ಎಂದು ನುಡಿದರು.