ಬೆಂಗಳೂರು:- ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಬೆಳಗಾವಿ ಅಧಿವೇಶನ ನಡೆಯುವ ಡಿಸೆಂಬರ್ 31 ರಿಂದ ಸಾರಿಗೆ ಮುಷ್ಕರಕ್ಕೆ ಈಗಾಗಲೇ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ.
ಕೈಗಾರಿಕಾ ವಿವಾದ ಕಾಯಿದೆ’ ಸೆಕ್ಷನ್- 22 ರ ಪ್ರಕಾರ ಮುಷ್ಕರಕ್ಕೂ ಮುನ್ನ 21 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್- 9 ರಂದು ಸಿಎಂಗೆ ನೋಟಿಸ್ ಕೊಟ್ಟು ಡಿಸೆಂಬರ್- 31 ರಿಂದ ಸಾರಿಗೆ ಮುಷ್ಕರ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆರು ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ಸೇರಿ ಜಂಟಿ ಕ್ರಿಯಾ ಸಮಿತಿ ಮಾಡಿಕೊಂಡಿದ್ದು, ಆ ಆರು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಸಿದ್ದರಾಮಯ್ಯನವರು ಉಡಾಫೆ ಮಾಡಿದರೆ ಬಸ್ ಸಂಚಾರ ಸ್ಥಗಿತಗೊಳ್ಳಲಿವೆ. ಈ ಹಿಂದೆಯೂ ಮೂರು ದಿನ ಮುಷ್ಕರ ಮಾಡಿದ ಮೇಲೆ ಸಿದ್ದರಾಮಯ್ಯ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದರು ಎಂದು ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಕೆಎಸ್ಆರ್ಟಿಸಿ ಮುಷ್ಕರ ಹೇಗೆ ನಡೆಯುತ್ತದೆ ಎಂಬುದು ನಿಮಗೆ ಗೊತ್ತಿದೆ. ನಮ್ಮನ್ನು ಕರೆದು ಹವಾ ತೋರಿಸಿ ಮುಷ್ಕರ ವಾಪಸ್ಸು ಪಡೆಯಲು ಆಗದು. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಮುಷ್ಕರ ನಿರ್ಧಾರ ಹಿಂಪಡೆಯುತ್ತೇವೆ. ನಮ್ಮ ಜಂಟಿ ಕ್ರಿಯಾ ಸಮಿತಿಯ ಎಲ್ಲಾ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ.
ನಮ್ಮ ಎಲ್ಲಾ ನೌಕರರು ಮುಷ್ಕರಕ್ಕೆ ಸಿದ್ಧರಾಗಲು ಸಮಾವೇಶ ಮಾಡುತ್ತೇವೆ. ಎಲ್ಲರಲ್ಲೂ ತಿಳಿವಳಿಕೆ ಮೂಡಿಸುತ್ತೇವೆ. ಬಹಳ ಯಶಸ್ವಿಯಾಗಿ ಮುಷ್ಕರ ಆಗಲಿದೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಸರ್ಕಾರಕ್ಕೆ ಸಾರಿಗೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.