‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಈ ವಾರ ಧರ್ಮ ಕೀರ್ತಿರಾಝ್ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಕಳೆದ ವಾರ ಧರ್ಮ ಸ್ನೇಹಿತೆ ಅನುಷಾ ರೈ ಮನೆಯಿಂದ ಹೊರ ಬಂದಿದ್ದರು. ಈ ವಾರ ಧರ್ಮ ಕೀರ್ತಿರಾಜ್ ಹೊರ ಬಂದಿದ್ದು, ಆಟದಲ್ಲಾಗಲೀ, ಮನರಂಜನೆಯಲ್ಲಾಗಲೀ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳಲಾಗದೆ ಆಟವನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ. ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ನಟ ಧರ್ಮ ಕೀರ್ತಿರಾಜ್ ಅವರು ಬೇಸರದ ಮನಸ್ಸಿನಿಂದ ಆಚೆ ಬಂದಿದ್ದಾರೆ.
ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಕ್ಷಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಧರ್ಮ ಕೀರ್ತಿರಾಜ್ ಮಾತ್ರ ಉಳಿದುಕೊಂಡಿದ್ದರು. ಇದಾದ ಬಳಿಕ ಕಿಚ್ಚ ಸುದೀಪ್ ಮನೆಯಿಂದ ಆಚೆ ಬರೋ ಸ್ಪರ್ಧಿ ಎಂದು ಧರ್ಮ ಕೀರ್ತಿರಾಜ್ ಅವರ ಹೆಸರು ಹೇಳಿದ್ದರು.
ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಹೇಳುತ್ತಿದ್ದಂತೆ ಎಲ್ಲಾ ಸ್ಪರ್ಧಿ ಬೇಸರಗೊಂಡರು. ಅಲ್ಲದೇ ಐಶ್ವರ್ಯ, ತ್ರಿವಿಕ್ರಮ್, ಭವ್ಯಾ ಗೌಡ ಕಣ್ಣೀರು ಹಾಕಿದ್ದಾರೆ. ಇದಾದ ಬಳಿಕ ಬಿಗ್ಬಾಸ್ ಮನೆಯಿಂದ ಆಚೆ ಬಂದು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿಯೂ ಧರ್ಮ ಅವರು ಬೇಸರ ಹೊರ ಹಾಕಿದ್ದಾರೆ.
ಈ ವಾರ ಧರ್ಮ ಕೀರ್ತಿರಾಜ್ ಅವರೇ ಹೊರಗೆ ಹೋಗುತ್ತಾರೆ ಎಂದು ವೀಕ್ಷಕರು ಕೂಡ ಊಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ಪ್ರೋಮೋದಲ್ಲಿ ಕೂಡ ಧರ್ಮ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದರೆ, ಅವರು ಹೈಲೈಟ್ ಆಗುವಂತಹ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಅವರು ಎಲಿಮಿನೇಟ್ ಆಗಿದ್ದರಲ್ಲಿ ಅಚ್ಚರಿ ಇಲ್ಲ ಎಂದು ವೀಕ್ಷಕರು ಹೇಳಿದ್ದಾರೆ.