ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಬಹುಮುಖ್ಯ ಪ್ರಾಮುಖ್ಯತೆ ನೀಡಲಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತುಳಸಿಯನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪವಿತ್ರ ಎಂದು ಭಾರತದಲ್ಲಿ ಪರಿಗಣಿಸಲ್ಪಟ್ಟಿರುವ ತುಳಸಿ ಗಿಡದ ಎಲೆ, ಹೂವು, ಬೇರು ಎಲ್ಲವೂ ಒಂದಲ್ಲಾ ಒಂದು ಔಷಧೀಯ ಗುಣಗಳನ್ನು ಹೊಂದಿವೆ. ಶೀತ ನೆಗಡಿ ಮೊದಲಾದವುಗಳಿಗೆ ಚಿಕಿತ್ಸೆಯಾಗಿ ತುಳಸಿಯ ಎಲೆಗಳನ್ನು ನೀವು ಜಗಿದು ನುಂಗಿರುವ ಅನುಭವ ಇರಬಹುದು.
ಆದರೆ ತುಳಸಿ ಎಲೆಗಳನ್ನು ಕುದಿಸಿ ತಯಾರಿಸಿದ ಟೀ ಸೇವನೆಯಿಂದಲೂ ಆರೋಗ್ಯ ವೃದ್ದಿಸಬಹುದು ಎಂಬುದನ್ಜು ಇದುವರೆಗೆ ನಿಮಗೆ ಯಾರೂ ಹೇಳಿರಲಿಕ್ಕಿಲ್ಲ. ನಿತ್ಯದ ಟೀ ಬದಲಿಗೆ ಈ ಟೀಯನ್ನು ಹೀರುವ ಮೂಲಕ ಕೆಲವಾರು ಅದ್ಭುತ ಎನಿಸುವ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಜ್ವರ, ಕೆಮ್ಮಿಗೆ ಅತ್ಯುತ್ತಮ ಔಷಧ
ಜ್ವರ, ಕೆಮ್ಮು, ನೆಗಡಿ, ಶೀತ ಮೊದಲಾದ ಸಮಸ್ಯೆಗಳಿಗೆ ತುಳಸಿ ಚಹಾ ಸೇವನೆ ಅತ್ಯುತ್ತಮ ಪರಿಹಾರವಾಗಿದೆ. ಬಿಸಿ ಬಿಸಿ ತುಳಸಿ ಚಹಾ ಕುಡಿಯುವುದರಿಂದ ಈ ಸಮಸ್ಯೆಗಳು ಫಟಾಫಟ್ ಕಡಿಮೆಯಾಗುತ್ತವೆ. ನಿಯಮಿತವಾಗಿ ತುಳಸಿ ಚಹಾ ಕುಡಿಯುತ್ತಿರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸುಲಭವಾಗಿ ಜ್ವರ, ಶೀತ ಕಾಣಿಸಿಕೊಳ್ಳುವುದಿಲ್ಲ.
ನೈಸರ್ಗಿಕ ರೋಗ ನಿರೋಧಕ
ಕೊರೋನಾ, ಓಮಿಕ್ರಾನ್ ಹರಡುವಿಕೆಯ ಮಧ್ಯೆ, ಒಂದು ಕಪ್ ಬಿಸಿ ತುಳಸಿ ಚಹಾ ಸೇವನೆ ದಿನದ ಉಲ್ಲಾಸಕರ ಆರಂಭವನ್ನು ನೀಡುವುದು. ಮಾತ್ರವಲ್ಲ, ಸೋಂಕು ಎಲ್ಲೆಡೆ ಹರಡುತ್ತಿರುವ ಈ ದಿನಗಳಲ್ಲಿ ತುಳಸಿ ಚಹಾದ ಸೇವನೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅತ್ಯುತ್ತಮ ಆ್ಯಂಟಿ ವೈರಲ್ ಮತ್ತು ಆ್ಯಂಟಿ ಕೊಲೆಸ್ಟ್ರಾಲ್ ಮೂಲಿಕೆಗಳಲ್ಲಿ ಒಂದಾಗಿರುವ ತುಳಸಿ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ತುಳಸಿ ಎಲೆಗಳು ವಿಟಮಿನ್ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳಿಂದ ತುಂಬಿವೆ. ಇದು ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ನ್ನು ಸಹ ಹೊಂದಿದೆ. ಹೀಗಾಗಿ ಸೋಂಕಿನ ವಿರುದ್ಧ ದೇಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡುತ್ತದೆ
ತುಳಸಿ ಚಹಾದ ಸೇವನೆ ಮನಸ್ಸಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಅತ್ಯುತ್ತಮ ಸ್ಟ್ರೆಸ್ಬಸ್ಟರ್ ಆಗಿ, ತುಳಸಿ ಚಹಾ ಕಾರ್ಯ ನಿರ್ವಹಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಮಾತ್ರವಲ್ಲ ಇದನ್ನು ಕುಡಿಯುವುದರಿಂದ ಖಿನ್ನತೆಯ ಸಮಸ್ಯೆಯೂ ಇಲ್ಲವಾಗುತ್ತದೆ. ತುಳಸಿಯಲ್ಲಿರುವ ಪೊಟ್ಯಾಶಿಯಮ್ ಅಂಶವು ಮೆದುಳಿನಲ್ಲಿರುವ ಸಿರೋಟೋನಿಕ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಹಜವಾಗಿಯೇ ಮನುಷ್ಯನ ಖಿನ್ನತೆ ಅಥವಾ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು
ತುಳಸಿ ಚಹಾವನ್ನು ಸಕ್ಕರೆ ಸೇರಿಸದೆ ಹಾಗೆಯೇ ಕುಡಿಯುವುದು ಮಧುಮೇಹ ನಿಯಂತ್ರಣಕ್ಕೂ ಒಳ್ಳೆಯದು. ಈ ರೀತಿಯ ಚಹಾ ಸೇವನೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಹೃದ್ರೋಗಗಳನ್ನು ತಡೆಯುತ್ತದೆ
ತುಳಸಿಯಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್ಗಳು ಮತ್ತು ಬೀಟಾ ಕ್ಯಾರೋಟಿನ್ ಅಂಶವಿರುವುದರಿಂದ ಇದು ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ತುಳಸಿ ಚಹಾವನ್ನು ಕುಡಿಯುವುದರಿಂದ ಆರೋಗ್ಯಕ್ಕೆ ರಕ್ತದ ಪರಿಚಲನೆಯು ಸುಗಮವಾಗುತ್ತದೆ. ಇದರಿಂದ ಹೃದಯ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಕಡಿಮೆಯಾಗಿರುತ್ತದೆ.
ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ
ಅಜೀರ್ಣ ಸಮಸ್ಯೆಗಳಿದ್ದಾಗ ತುಳಸಿ ಚಹಾ ಅತ್ಯುತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸಲು ತುಳಸಿ ಚಹಾ ಸೇವನೆ ಒಳ್ಳೆಯದು. ತುಳಸಿಯಲ್ಲಿರುವ ಉತ್ತಮ ಅಂಶಗಳು ಜಠರದ ಸಮಸ್ಯೆಯನ್ನೂ ನಿವಾರಣೆ ಮಾಡುತ್ತದೆ.