ರಕ್ತದಲ್ಲಿ ಅಧಿಕ ಸಕ್ಕರೆ ಇರುವುದು ಅಥವಾ ಮಧುಮೇಹವು ಗಂಭೀರವಾದ ಆರೋಗ್ಯದ ಕಾಯಿಲೆಯಾಗಿ ಪರಿಣಮಿಸಿದೆ. ಹಲವಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದ್ರೆ ಇತ್ತೀಚೆಗೆ ಸಣ್ಣ ಮಕ್ಕಳಲ್ಲಿ ಕೂಡ ಮಧುಮೇಹ, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಉಂಟಾಗುತ್ತಿರುವುದು ಕಳವಳ ಮೂಡಿಸಿದೆ.
Health Tips: ಬೂದುಕುಂಬಳ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?
ಟೈಪ್ 1 ಮಧುಮೇಹವು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದ ಸ್ಥಿತಿಯಾಗಿದೆ. ಇನ್ಸುಲಿನ್ ಎಂಬುದು ನಮ್ಮ ದೇಹದ ಪ್ರಮುಖ ಹಾರ್ಮೋನ್ ಆಗಿದೆ. ನಿಮ್ಮ ಮಗುವನ್ನು ಮಧುಮೇಹದಿಂದ ರಕ್ಷಿಸುವಲ್ಲಿ ಕುಟುಂಬದ ರಕ್ತ ಸರಪಳಿಯು ಜಾಗರೂಕರಾಗಿರಲು ಪ್ರಮುಖ ಪಾತ್ರ ವಹಿಸುತ್ತದೆ.
ಮಕ್ಕಳಲ್ಲಿ ಮಧುಮೇಹದ ಲಕ್ಷಣವೇನು?
ನಗರ ಪ್ರದೇಶದ ಮಕ್ಕಳ ಹೊಟ್ಟೆ ಹಾಗೂ ಸೊಂಟದ ಭಾಗ ದಪ್ಪಗಾಗುತ್ತಿದೆ. ಇದರಿಂದಾಗಿ ಇನ್ಸುಲಿನ್ ಪ್ರತಿರೋಧಕ ಹೆಚ್ಚಿ, ಟೈಪ್ 2 ಮಧುಮೇಹದ ಆತಂಕವೂ ಹೆಚ್ಚಿದೆ. ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಇದ್ದರೂ ಕಡಿಮೆ. ಮಕ್ಕಳಲ್ಲಿ ಮಧುಮೇಹ ಆರಂಭವಾಗಿದೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿಯಬಹುದು.
ಅವರಿಗೆ ಬಾಯಾರಿಕೆ ಹೆಚ್ಚು. ಅಧಿಕ ನೀರು ಕುಡಿಯುವುದರಿಂದ ಅವರು ಪದೇ ಪದೆ ಮೂತ್ರಕ್ಕೆ ಹೋಗಬಹುದು. ಹಾಸಿಗೆಯಲ್ಲೂ ಮೂತ್ರ ವಿಸರ್ಜನೆ ಆಗಬಹುದು. ಹಸಿವು ಹೆಚ್ಚಬಹುದು. ಹೆಚ್ಚು ತಿಂದರೂ ತೃಪ್ತಿಯಾಗದೆ ಇರಬಹುದು. ಆಲಸಿತನ ಕಾಡಬಹುದು. ಹಾಗೆಯೇ ಇದ್ದಕ್ಕಿದ್ದ ಹಾಗೆ ತೂಕ ಕಡಿಮೆ ಆಗಲು ಶುರುವಾಗಬಹುದು. ಕಿರಿಕಿರಿ ಮಾಡಿಕೊಳ್ಳಬಹುದು, ವರ್ತನೆಯಲ್ಲಿ ಬದಲಾವಣೆ ಕಂಡುಬರಬಹುದು, ಅವರ ಉಸಿರು ಹಣ್ಣಿನವಾಸನೆಯಿಂದ ಕೂಡಿರಬಹುದು.
ಪಾಲಕರು ಮಾಡಬೇಕಾದುದೇನು?
ಆರೋಗ್ಯಕರ ಆಹಾರದ ಅಭ್ಯಾಸ
ಮಕ್ಕಳಲ್ಲಿ ಆರೋಗ್ಯಕರ ಆಹಾರ ಅಭ್ಯಾಸವಾಗಬೇಕಾದರೆ ಮೊದಲು ಪಾಲಕರಲ್ಲಿ ಈ ಅರಿವು ಮೂಡಬೇಕು. ತಾವು ಸ್ವತಃ ಜಂಕ್ ಫುಡ್ ತೊರೆದು, ಉತ್ತಮ ಆಹಾರದ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಯಾವುದೇ ಕಾರಣಕ್ಕೂ ಚಾಕೋಲೇಟ್ ಸೇರಿದಂತೆ ಮನೆಗೆ ಯಾವುದೇ ಬಾಹ್ಯ ತಿಂಡಿತಿನಿಸು ತರಬಾರದು. ಹುಟ್ಟುಹಬ್ಬ, ಹಬ್ಬ ಮುಂತಾದ ಸಮಯದಲ್ಲಿ ಮನೆಯಲ್ಲೇ ಸಿಹಿತಿನಿಸು ಸಿದ್ಧ ಮಾಡಬೇಕು. ಸ್ಕ್ರೀನ್ ನೋಡುತ್ತ ಆಹಾರ ತಿನ್ನಬಾರದು. ಮಕ್ಕಳಿಗೆ ತರಕಾರಿ, ಹಣ್ಣು ಸೇವಿಸುವ ಅಭ್ಯಾಸ ಮಾಡಿಸಬೇಕು. ಹೆಚ್ಚು ನೀರು ಕುಡಿಯಲು ತಿಳಿಸಬೇಕು. ಮಕ್ಕಳ ಆಹಾರದಲ್ಲಿ ನೆಲ್ಲಿಕಾಯಿ, ಅರಿಶಿಣ ಮುಂತಾದವುಗಳನ್ನು ಬಳಕೆ ಮಾಡಬೇಕು. ಹಾಗೆಯೇ, ನಿಗದಿತ ಸಮಯಕ್ಕೆ ಆಹಾರ, ನಿದ್ರೆ ರೂಢಿಸಬೇಕು.
ದೈಹಿಕ ಚಟುವಟಿಕೆ
ಬೊಜ್ಜು ದೇಹದ ಮಕ್ಕಳಿಗೆ ಕಡ್ಡಾಯವಾಗಿ ವ್ಯಾಯಾಮ, ಆಟೋಟ ಮಾಡಿಸಬೇಕು. ಮನೆಯಲ್ಲಿ ವ್ಯಾಯಾಮ (Exercise) ಮಾಡುವುದರಿಂದ ಹಿಡಿದು, ಹೊರಗೆ ಆಟವಾಡುವ ಅಭ್ಯಾಸ ಮಾಡಿಸಬೇಕು. ಯಾವುದಾದರೂ ಕ್ಲಾಸ್ ಗೆ ಸೇರಿಸಬಹುದು. ಮಕ್ಕಳು ದಿನಕ್ಕೆ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಅಗತ್ಯ.
ಮಾನಸಿಕ ಆರೋಗ್ಯ
ಪಾಲಕರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಶಿಕ್ಷಣಕ್ಕೆ ಸಂಬಂಧಿಸಿ ಅವರು ಎದುರಿಸುವ ಒತ್ತಡದ ಬಗ್ಗೆ ಅರಿತುಕೊಳ್ಳಬೇಕು. ಸಮಾನ ವಯಸ್ಕರಿಂದ ಉಂಟಾಗುವ ಒತ್ತಡದ ಬಗ್ಗೆಯೂ ಮನೆಯಲ್ಲಿ ಮುಕ್ತ ಮಾತುಕತೆ ನಡೆಯಬೇಕು.