ಬಾಗಲಕೋಟೆ:- ಇತ್ತೀಚೆಗೆ ಆನ್ಲೈನ್ ಡೆಲಿವರಿ ಮಾಡಿದ್ದ ಹೇರ್ ಡ್ರೈಯರ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿ ನಡೆದ ತನಿಖೆಯಲ್ಲಿ ಸ್ಫೋಟದ ಹಿಂದೆ ಲವ್ ಸ್ಟೋರಿ ಮತ್ತು ಕೊಲೆಗೆ ಸ್ಕೆಚ್ ಇರುವುದು ಬಹಿರಂಗವಾಗಿದೆ.
ಜಿಲ್ಲೆಯ ಇಳಕಲ್ ನಗರದಲ್ಲಿ ನವೆಂಬರ್ 15 ರಂದು ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ ಬಸವರಾಜೇಶ್ವರಿ ಯರನಾಳ ಎರಡು ಮುಂಗೈ ಕಟ್ ಆಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಎಂದು ಅಚ್ಚರಿಯಾಗಿತ್ತು. ಇದೀಗ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ಇದು ಸರಿಯಲ್ಲ ಎಂದು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದ ಸಿದ್ದಪ್ಪ ಗ್ರಾನೈಟ್ ಡೆಟೊನೇಟರ್ ಡ್ರೈಯರ್ನಲ್ಲಿ ಅಳವಡಿಸಿ ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಪ್ರೇಯಸಿ ಬಸವರಾಜೇಶ್ವರಿ ಕೈ ಕಳೆದುಕೊಳ್ಳುವಂತಾಗಿದೆ.
ಸಿದ್ದಪ್ಪ ಎಮ್ಎಬಿಎಡ್ ಓದಿದ್ದು, ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಮದುವೆಗೂ ಮುನ್ನವೇ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಬಸವರಾಜೇಶ್ವರಿ ಅವರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣನಿಗೆ ಮದುವೆ ಮಾಡಿ ಕೊಡಲಾಗಿತ್ತು. ಪಾಪಣ್ಣ 2017 ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ ಇವರಿಬ್ಬರ ಲವ್ ಮತ್ತಷ್ಟು ಗಟ್ಟಿಯಾಗಿತ್ತು.
ಬಸವರಾಜೇಶ್ವರಿ ರಕ್ಕಸಗಿ ಬಿಟ್ಟು ಇಳಕಲ್ ನಗರದ ಬಸವನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ನೆಲೆಸಿದ್ದಳು. ಸಿದ್ದಪ್ಪ ಅಲ್ಲಿಗೆ ಬರುವುದು ಹೋಗೋದು ಮಾಡುತ್ತಿದ್ದ. ಶಶಿಕಲಾ ಕೂಡ ಮೃತ ಯೋಧನ ಪತ್ನಿಯಾಗಿದ್ದಳು. ಇದು ಸರಿಯಲ್ಲ ಆತನ ಸಹವಾಸ ಬಿಡು ಎಂದು ಹೇಳ್ತಿದ್ದಳು. ಈ ಹಿನ್ನೆಲೆ ಕೆಲ ದಿನಗಳಿಂದ ಬಸವರಾಜೇಶ್ವರಿ ಸಿದ್ದಪ್ಪನನ್ನು ಮನೆಗೆ ಬರಲು ಅವಕಾಶ ನೀಡಿರಲಿಲ್ಲ. ಇದರಿಂದ ಹದಿನೈದು ದಿನದಿಂದ ಶಶಿಕಲಾ ಕೊಲೆಗೆ ಸಿದ್ದಪ್ಪ ಸ್ಕೆಚ್ ಹಾಕಿದ್ದ. ಸಿದ್ದಪ್ಪ ಡಾಲ್ಫಿನ್ ಎಂಬ ಹೆಸರಿನ ಗ್ರಾನೈಟ್ ಕಂಪನಿಯಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿದ್ದ. ಆತನಿಗೆ ಡೆಟೊನೇಟರ್ ಸ್ಪೋಟದ ಬಗ್ಗೆ ಮಾಹಿತಿಯಿತ್ತು.
ಸಿದ್ದಪ್ಪ, ಡೆಟೊನೇಟರ್ ಸ್ಪೋಟಕ ಬಳಸಿ ಶಶಿಕಲಾ ಕೊಲೆಗೆ ಸ್ಕೆಚ್ ಹಾಕಿದ್ದ. ಇಳಕಲ್ ನಗರದ ದೇವಗಿರಿಕರ್ ಎಂಬುವರ ಅಂಗಡಿಯಲ್ಲಿ ನವೆಂಬರ್ 10 ರಂದು 500 ರೂ. ಕೊಟ್ಟು ಹೇರ್ ಡ್ರೈಯರ್ ಖರೀದಸಿದ್ದ. ಅದರಲ್ಲಿ ಡೆಟೊನೇಟರ್ ಅಳವಡಿಸಿ ನ. 13 ರಂದು ಕೊರಿಯರ್ ಮಾಡಿದ್ದ ಎನ್ನಲಾಗಿದೆ.