ಮಂಡ್ಯ: ಸ್ಥಾನಮಾನಕ್ಕಾಗಿ ಸುಮಲತಾ ಪ್ರತಿಭಟನೆಯಲ್ಲಿ ಭಾಗಿ ಎಂದು ಲೇವಡಿ ಮಾಡಿದ್ದ ಚಲುವರಾಯಸ್ವಾಮಿಗೆ ಮಾಜಿ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ. ಮಂಡ್ಯದಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಶೀರ್ಷಿಕೆಯಡಿ ಬಿಜೆಪಿ ವಕ್ಫ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಸಂಸದೆ ಸುಮಲತಾ ಭಾಗಿಯಾಗಿದ್ದರು. ಇದೇ ವಿಚಾರವಾಗಿ ಚಲುವರಾಯಸ್ವಾಮಿ ಲೇವಡಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾ, ಅವರು ಏನು ಬೇಕಾದರು ಹೇಳಿಕೊಳ್ಳಲಿ ಕ್ಷೇತ್ರವನ್ನ ಬಿಟ್ಟು ಕೊಟ್ಟು ಬಿಜೆಪಿ ಸೇರಿದವಳು ನಾನು. ನಮ್ಮದು ತ್ಯಾಗ ಮಾಡಿರುವ ಕುಟುಂಬ. ಯಾವುದಕ್ಕೂ ಆಸೆ ಪಡುವ ಕುಟುಂಬವಲ್ಲ. ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಆಸೆ ಇದೆ. ಯಾವುದೇ ವೈಯಕ್ತಿಕ ಆಸೆ ನಮಗಿಲ್ಲ. ವೈಯಕ್ತಿಕ ಆಸೆಗಾಗಿ ರಾಜಕಾರಣ ಮಾಡುವವರ ಲೀಸ್ಟ್ ನಮ್ಮ ಮುಂದೆ ಇದೆ. ಬಿಜೆಪಿ ಪಕ್ಷ ಸೇರಿರುವುದೇ ನನಗೆ ಸ್ಥಾನಮಾನ. ಮೋದಿ ಹಿಂದೆ ನಾವು ಇದ್ದೇವೆ, ಅವರ ಕೆಳಗೆ ಕೆಲಸ ಮಾಡ್ತಿರುವುದೇ ನಮಗೆ ಗೌರವ. ನಾನು ಮಂಡ್ಯದಿಂದ ಎಂಪಿ ಆಗಿದ್ದೆ. ಅಂಬರೀಶ್ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದರು. ಕೇಂದ್ರದಲ್ಲಿಯೂ ಮಂತ್ರಿಯಾಗಿದ್ದರು. ಎಲ್ಲವನ್ನೂ ನೋಡಿದ್ದೇವೆ, ಇದಕ್ಕಿಂತ ಇನ್ನೇನೂ ಸ್ಥಾನಮಾನ ಇನ್ನೇನು ಬೇಕು. ಎಲ್ಲ ಅಧಿಕಾರವನ್ನೂ ನೋಡಿದ್ದೇವೆ. ಪಾಪುಲಾರಿಟಿಯನ್ನ ಸಿನಿಮಾ, ರಾಜಕೀಯ ರಂಗ ಎರಡರಲ್ಲೂ ನೋಡಿದ್ದೇವೆ. ಏನೂ ಕಾಣದವರು ಆ ರೀತಿ ಮಾತಾಡಬಹುದು ಎಂದು ಟಾಂಗ್ ನೀಡಿದರು.
ಇನ್ನೂ ಪಡಿತರ ಚೀಟಿ ರದ್ದು ವಿಚಾರವಾಗಿ ಮಾತನಾಡಿ, ಎಲೆಕ್ಷನ್ ಗೆಲ್ಲೋಕೆ ಇಷ್ಟ ಬಂದಾಗೆ ಆಶ್ವಾಸನೆ ಕೊಟ್ಟರು. ಅದು ಉಚಿತ, ಇದು ಖಚಿತ, ಅದು ನಿಶ್ವಿತ ಎಂದರು. ಇವಾಗ ಸರ್ಕಾರ ದಿವಾಳಿಯಾಗಿದೆ. ಅದಕ್ಕೆ ಒಂದೊಂದೆ ಕಟ್ ಮಾಡ್ಕೊಂಡು ಬರ್ತೀರಾ. ಜನರಿಗೆ ಯಾವ ರೀತಿ ಅನ್ಯಾಯ ಮಾಡಿ ಬಲಿ ಮಾಡ್ತಿದ್ದೀರಾ. ಬಡವರಿಗೆ, ರೈತರಿಗೆ ಮಾಡ್ತಿರುವ ಅನ್ಯಾಯ ಕಾಣ್ತಿಲ್ವ.ಗ್ಯಾರಂಟಿ ಕೊಡೋಕೆ ಕಾಂಗ್ರೆಸ್ ಸರ್ಕಾರಕ್ಕೆ ಆಗ್ತಿಲ್ಲ. ಅದಕ್ಕೆ ರದ್ದು ಮಾಡ್ತಿದ್ದಾರೆ ಎಂದು ಸುಮಲತಾ ಕಿಡಿ ಕಾರಿದರು.