ಚಿಕ್ಕಮಗಳೂರು:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ಕೊಲೆ, ಕೊಲೆಯತ್ನಗಳು ನಡೆಯುತ್ತಿವೆ.
ಅದರಂತೆ ಇಲ್ಲೊಂದು ಘಟನೆ ಬೆಚ್ಚಿ ಬೀಳಿಸಿದ್ದು, ವ್ಯಕ್ತಿ ಓರ್ವ ಜೋಡಿ ಕೊಲೆ ಮಾಡಿದ್ದಾನೆ. ಹಣಕ್ಕಾಗಿ ಸಂಬಂಧಿಕನಿಂದಲೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ಘಟನೆ ಜರುಗಿದೆ. ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ತುಮಕೂರು ಜಿಲ್ಲೆ ಗುಬ್ಬಿ ಮೂಲದ ದಂಪತಿಗಳಾದ 65 ವರ್ಷದ ಬಸಪ್ಪ, 58 ವರ್ಷದ ಲಲಿತಮ್ಮ ಮೃತ ದುರ್ದೈವಿಗಳು ಎನ್ನಲಾಗಿದೆ.
ವೃದ್ಧ ದಂಪತಿಯ ಸಂಬಂಧಿಕನೊಬ್ಬ ಆಗಾಗ್ಗೆ ಹಣಕ್ಕೆ ಪೀಡಿಸುತ್ತಿದ್ದ. ಅದೇ ರೀತಿ ಇಂದು ಸಹ ಹಣಕ್ಕಾಗಿ ಪೀಡಿಸಿದ್ದಾನೆ, ಹಣ ಕೊಡದಿದ್ದಕ್ಕೆ ದೊಣ್ಣೆಯಿಂದ ಹೊಡೆದು ಇಬ್ಬರನ್ನು ಕೊಂದು ಪರಾರಿಯಾಗಿದ್ದಾನೆ.
ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.