ಕರ್ನಾಟಕದಲ್ಲಿ ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ. ಸರ್ಕಾರ ಸದ್ದಿಲ್ಲದೆ ಬಿಪಿಎಲ್ ಕಾರ್ಡ್ ಆಪರೇಷನ್ಗೆ ಇಳಿದಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿ ರದ್ದು ಮಾಡಲಾಗುತ್ತಿದೆ. ಈ ಬೆನ್ನಲ್ಲೆ ನಮ್ಮ ಮನೆಗಳ ಬಿಪಿಎಲ್ ಕಾರ್ಡ್ ಅರ್ಹವೋ ಅಥವಾ ಅನರ್ಹವೋ ಎಂಬ ಚರ್ಚೆ ಜೋರಾಗಿದೆ.
ಅದರಲ್ಲೂ ಬಡವರ BPL ಕಾರ್ಡ್ ಹೆಚ್ಚಾಗಿ ರದ್ದಾಗುತ್ತಿದ್ದು, ಇದಕ್ಕೆ ಕಾರಣವನ್ನು ಈ ಕೆಳಗೆ ತಿಳಿಸಲಾಗಿದೆ.
ಆಧಾರ್ ಕಾರ್ಡ್ ಗಳನ್ನು ರೇಷನ್ ಕಾರ್ಡ್ ಗಳಿಗೆ ಲಿಂಕ್ ಮಾಡಲಾಗಿದೆ. ರೇಷನ್ ಕಾರ್ಡ್ ದಾರರಲ್ಲಿ ಯಾರು ಬಿಪಿಎಲ್ ಕಾರ್ಡ್ ಗಳಿಗೆ ಅನರ್ಹ ಎಂಬುದನ್ನು ಪತ್ತೆ ಹಚ್ಚಲು ಇ- ಗವರ್ನನ್ಸ್ ಇಲಾಖೆಯ ಸುಪರ್ದಿಗೆ ಸರ್ಕಾರ ಒಪ್ಪಿಸಿದೆ. ಈಗಾಗಲೇ ತೆರಿಗೆದಾರರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿರುವುದರಿಂದ ನಮ್ಮಲ್ಲಿ ಆದಾಯ ತೆರಿಗೆದಾರರಾಗಿ ನೋಂದಾಯಿಸಲ್ಪಟ್ಟಿರುವವರನ್ನು ಪತ್ತೆ ಮಾಡಲು ಇ – ಗವರ್ನನ್ಸ್ ಇಲಾಖೆ ಆದಾಯ ತೆರಿಗೆ ಇಲಾಖೆಯ ಮೊರೆ ಹೋಗಿದೆ. ಅಸಲಿಗೆ, ಇಲ್ಲೇ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಗಡುವನ್ನು ನೀಡಿತ್ತು. ಪದೇ ಪದೇ ಗಡುವನ್ನು ವಿಸ್ತರಿಸುತ್ತಾ ಬಂದಿದ್ದರೂ ಹಲವಾರು ಮಂದಿ ಲಿಂಕ್ ಮಾಡಿಯೇ ಇರಲಿಲ್ಲ. ಅವುಗಳಲ್ಲಿ ಕರ್ನಾಟಕದ ಹಲವಾರು ಬಡಕುಟುಂಬಗಳೂ ಇವೆ. ಹೀಗೆ ಆಧಾರ್ – ಪಾನ್ ಕಾರ್ಡ್ ಲಿಂಕ್ ಮಾಡದವರಿಗೆ ಕೇಂದ್ರ ಸರ್ಕಾರ 1 ಸಾವಿರ ರೂ. ದಂಡವನ್ನು ವಿಧಿಸಿದೆ. ದಂಡ ಪ್ರಯೋಗವಾದ ನಂತರ ಬಹುತೇಕ ಮಂದಿ ದಂಡವನ್ನು ಕಟ್ಟಿ, ತಮ್ಮ ಆಧಾರ್ ಗೆ ಪಾನ್ ಕಾರ್ಡ್ ಲಿಂಕ್ ಮಾಡಿದ್ದಾರೆ.
ತಡವಾಗಿ ಆಧಾರ್ – ಪಾನ್ ಕಾರ್ಡ್ ಲಿಂಕ್ ಮಾಡಿದಾಗ ಕಟ್ಟಿರುವ ದಂಡವನ್ನು ಆದಾಯ ತೆರಿಗೆ ಇಲಾಖೆಯ ಸಾಫ್ಟ್ ವೇರ್ ಗಳಲ್ಲಿ ಆದಾಯ ತೆರಿಗೆಯೆಂದೇ ಪರಿಗಣಿಸಡಲಾಗಿದೆ. ಹಾಗೆಯೇ ದಂಡ ಕಟ್ಟಿರುವವರನ್ನು ಆದಾಯ ತೆರಿಗೆದಾರರಾಗಿ ಪರಿಗಣಿಸಲಾಗಿದ್ದರೆ, ದಂಡ ಕಟ್ಟದವರನ್ನು ಆದಾಯ ತೆರಿಗೆ ಬಾಕಿ ಉಳಿಸಿಕೊಂಡವರೆಂದು ವರ್ಗೀಕರಿಸಲಾಗಿದೆ. ಅದೇ ಕಾರಣದಿಂದಲೇ ಕರ್ನಾಟಕ ಸರ್ಕಾರದ ಇ- ಗವರ್ನನ್ಸ್ ಇಲಾಖೆಗೆ ಆದಾಯ ತೆರಿಗೆ ಇಲಾಖೆಯು ಸಲ್ಲಿಸಿರುವ ತೆರಿಗೆದಾರರ ಪಟ್ಟಿಯಲ್ಲಿ ರಾಜ್ಯದ ಅನೇಕ ಬಡಕುಟುಂಬಗಳೂ ಸೇರಿವೆ. ಬಹುಶಃ ಈಗ ಅನೇಕ ಬಡವರ ಬಿಪಿಎಲ್ ಕಾರ್ಡ್ ರದ್ದಾಗಿರಬಹುದೇ ಎಂಬ ಗುಮಾನಿಗಳು ಉದ್ಭವವಾಗಿವೆ