ಜೈಲಿನಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿರುವ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ನನ್ನು ಅಮೆರಿಕದಲ್ಲಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
2022 ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, ಕಳೆದ ತಿಂಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆ ಸೇರಿದಂತೆ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಅನ್ಮೋಲ್ ಆರೋಪಿಯಾಗಿದ್ದಾನೆ. ಈತನನ್ನು ಸೋಮವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಅನ್ಮೋಲ್ ನನ್ನು ಅಮೆರಿಕದಿಂದ ಮರಳಿ ಭಾರತಕ್ಕೆ ಕರೆತರಲು ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆತನ ಬಂಧನಕ್ಕೆ ಮಹಾರಾಷ್ಟ್ರದ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಸಹ ಜಾರಿ ಮಾಡಿದೆ. ಜಾಗತಿಕ ಕಾನೂನು ಜಾರಿ ಸಂಸ್ಥೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿದೆ.
ಪಂಜಾಬ್ನ ಫಾಜಿಲ್ಕಾ ಮೂಲದ ಅನ್ಮೋಲ್ ಬಿಷ್ಣೋಯ್, ನಕಲಿ ಪಾಸ್ಪೋರ್ಟ್ ಬಳಸಿ ಭಾರತದಿಂದ ಪಲಾಯನ ಮಾಡಿದ ನಂತರ ಕೆನಡಾದಲ್ಲಿದ್ದ ಎಂದು ಈ ಹಿಂದೆ ಹೇಳಲಾಗಿತ್ತು ಎನ್ಐಎ ಆತನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದ್ದು, ಆತನ ಬಂಧನಕ್ಕೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. 18 ಪ್ರಕರಣಗಳಲ್ಲಿ ಆರೋಪಿ ಆಗಿರುವ ಅನ್ಮೋಲ್ ಸಿಧು ಮೂಸೆವಾಲಾ ಹತ್ಯೆ ಕೇಸ್ನಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದೆ.