ಮಂಡ್ಯ: ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರ ಸಹಕಾರ, ಬೆಂಬಲ ಅತ್ಯವಶ್ಯಕ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ಹೇಳಿದರು.
Accident: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು, ಯುವತಿ ಗಾಯ!
ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ಸಾಹಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮಂಡ್ಯದ ಆತಿಥ್ಯ, ಸತ್ಕಾರವನ್ನು ಎಲ್ಲರೂ ನೆನೆಯಬೇಕು. ಆ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮಂಡ್ಯಕ್ಕೆ ತನ್ನದೇ ಆದ ಸೊಗಡಿದೆ. ವೈಶಿಷ್ಟ್ಯ ಇದೆ. ನೂರಕ್ಕೆ ನೂರು ಈ ಸಮ್ಮೇಳನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಎಲ್ಲರ ಸಲಹೆ, ಮಾರ್ಗದರ್ಶನ, ಅಭಿಪ್ರಾಯ ಪಡೆಯಲಾಗುತ್ತಿದೆ. ಜನಸಾಮಾನ್ಯರಾದಿಯಾಗಿ ಎಲ್ಲರ ಸಲಹೆಗಳನ್ನು ಸ್ವೀಕರಿಸಿ, ಸಮಿತಿಯೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಾಹಿತ್ಯ ಸಮ್ಮೇಳನದ ಕುರುಹು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಲಾಮಂದಿರ ದುರಸ್ತಿ ಕಾರ್ಯ ವಾರದಲ್ಲಿ ಪೂರ್ಣಗೊಳ್ಳಲಿದೆ. ಅಂಬೇಡ್ಕರ್ ಭವನ ರೆಡಿಯಾಗಲಿದೆ. ರೈತ ಭವನಕ್ಕೆ ಚಾಲನೆ ನೀಡಲಾಗಿದೆ.
ಶಿವಪುರ ಧ್ವಜ ಸತ್ಯಾಗ್ರಹ ಪ್ರತಿಷ್ಠಾನ ರಚನೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಮೂವತ್ತು ವರ್ಷದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ.ಕೃಷಿ ವಿವಿ, ಸಕ್ಕರೆ ಕಾರ್ಖಾನೆ ಪುನರಾರಂಭಿಸಲಾಗಿದೆ. ನೂತನ ಸಕ್ಕರೆ ಕಾರ್ಖಾನೆ ಬಗ್ಗೆ ಸಂಪುಟದ ಚರ್ಚೆಗೆ ಕಳುಹಿಸಲಾಗಿದೆ. ಅಭಿವೃದ್ಧಿ ನಿರಂತರ, ಸಾಹಿತ್ಯ ಸಮ್ಮೇಳನ ವಿಶೇಷ. ಮೂವತ್ತು ವರ್ಷಗಳ ನಂತರ ನಡೆಯುತ್ತಿರುವ ಈ ಸಮ್ಮೇಳನವನ್ನು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ನೆರವೇರಿಸಲಾಗುವುದು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಗಳಾದ ಡಾ. ಕೃಷ್ಣೇಗೌಡ ಹುಸ್ಕೂರು, ವಿ ಹರ್ಷ ಸೇರಿದಂತೆ ಇನ್ನಿತರರ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.