ನವದೆಹಲಿ: ನಿನ್ನೆಯಷ್ಟೇ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಕೈಲಾಶ್ ಗೆಹ್ಲೋಟ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೈಲಾಶ್ ಗೆಹ್ಲೋಟ್ ಪಕ್ಷದ ನಿರ್ದೇಶನ ಮತ್ತು ಆಂತರಿಕ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲಿ ಯಾವುದೇ ಭರವಸೆಯನ್ನು ಈಡೇರಿಸಿದ ಸರ್ಕಾರದ ವಿರುದ್ದ ಅಸಮಾಧಾನ ತೋರಿ ಎಎಪಿಗೆ ರಾಜೀನಾಮೆ ನೀಡಿದ್ದರು. ಇದೀಗ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಗೆಹ್ಲೋಟ್, ಇದು ನನಗೆ ಸುಲಭದ ಹೆಜ್ಜೆಯಲ್ಲ. ನಾನು ಅಣ್ಣಾಜಿಯವರ ಕಾಲದಿಂದಲೂ ಎಎಪಿಯೊಂದಿಗೆ ಸಂಬಂಧ ಹೊಂದಿದ್ದೇನೆ. ದೆಹಲಿಯ ಜನರಿಗಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ನಾನು ಯಾವತ್ತೂ ಒತ್ತಡದಲ್ಲಿ ಏನನ್ನೂ ಮಾಡಿಲ್ಲ. ನಾನು ಎಎಪಿಗೆ ಸೇರಲು ನನ್ನ ವಕೀಲ ವೃತ್ತಿಯನ್ನು ತೊರೆದಿದ್ದೇನೆ. ನಮ್ಮ ಏಕೈಕ ಉದ್ದೇಶ ದೆಹಲಿಯ ಜನರಿಗೆ ಸೇವೆ ಸಲ್ಲಿಸುವುದಾಗಿದೆ ಎಂದರು. ‘ಆ ಮೌಲ್ಯಗಳಿಗೆ ಧಕ್ಕೆಯಾಗುತ್ತಿರುವುದನ್ನು ಕಂಡು ಅತೀವ ನೋವಿನಿಂದ ಪಕ್ಷ ತೊರೆದಿದ್ದೇನೆ’ ಎಂದಿದ್ದಾರೆ.