ಬೆಂಗಳೂರು : ಕನಕ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಜ್ಯದ ಜನತೆಗೆ ಕನಕ ಜಯಂತಿಯ ಶುಭಾಶಯಗಳನ್ನು ಕೋರಿದರು. ಈ ವೇಳೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕನಕದಾಸರು ಸಂತರಷ್ಟೇ ಅಲ್ಲದೇ ದಾರ್ಶನಿಕರೂ, ಸಮಾಜ ಸುಧಾರಕರೂ ಆಗಿದ್ದರು. ವಿಶ್ವಮಾನವರೂ ಆಗಿದ್ದ ಅವರ ಜಯಂತ್ಯೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದರು. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಕಾಗಿನೆಲೆ ಅವರ ಕರ್ಮಭೂಮಿ. ಕಾವ್ಯ, ಕೀರ್ತನೆಗಳನ್ನು ರಚನೆ ಮಾಡಿದ್ದರು ಎಂದು ವಿವರಿಸಿ ನಾಡಿನ ಎಲ್ಲಾ ಜನರಿಗೂ ಕನಕ ಜಯಂತಿಯ ಶುಭಾಶಯಗಳನ್ನು ಕೋರಿದರು.