ಹಾವೇರಿ ;- ಇಲ್ಲಿನ ರಾಕ್ಸ್ಟಾರ್ ಹೋರಿ ಸವಿನೆನಪಿಗಾಗಿ ಅಭಿಮಾನಿಗಳು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ನಾಗೇಂದ್ರನಮಟ್ಟಿಯ ವಿಶಾಲ ಮೈದಾನದಲ್ಲಿ ಆಯೋಜನೆ ಮಾಡಿದ್ದರು
ಹೋರಿಗಳನ್ನ ಮಾಲೀಕರು ಬಲೂನ್, ರಿಬ್ಬನ್, ಜೂಲಾ, ಗೆಜ್ಜೆ, ಕೊಂಬೆಣಸು ಕೊಬ್ಬರಿ ಹಾರ ಕಟ್ಟಿ ಅಖಾಡಕ್ಕೆ ಬಿಟ್ಟಿದ್ದೇ ತಡ, ಮಿಂಚಿನಂತೆ ಓಡಿ ಮಾಯವಾಗುತ್ತಿದ್ದವು. ನವಯುವಕರು ಹೋರಿಯನ್ನ ಹಿಡಿಯೋ ದೃಶ್ಯಗಳು ನೋಡುಗರ ಮೈನವಿರೇಳಿಸುವಂತೆ ಇತ್ತು.
ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಜನರು ಗಾಯಗೊಂಡ ಘಟನೆಗಳು ಸಹ ನಡೆದವು. ಕೊಬ್ಬರಿ ಹೋರಿಗಳ ತಿವಿತದಿಂದ ಎದೆ ಭಾಗ, ಕೈ ಕಾಲು ಸೇರಿ ಪೈಲ್ವಾನರ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಓರ್ವ ವ್ಯಕ್ತಿಯ ಕಣ್ಣು ಗುಡ್ಡೆಯೇ ಕಿತ್ತು ಹೋಗಿದ್ದು, ಹುಬ್ಬಳ್ಳಿಯ ಕಿಮ್ಸ್ಗೆ ಸೇರಿಸಲಾಗಿದೆ.
ಸ್ಪರ್ಧೆಯಲ್ಲಿ ಮೋಟಾರ್ ಸೈಕಲ್ ಸೇರಿದಂತೆ ಚಿನ್ನ ಮತ್ತು ಇತರ ವಸ್ತುಗಳನ್ನ ಬಹುಮಾನವಾಗಿ ಇಡಲಾಗಿತ್ತು. ಜನರು ಅತ್ಯಂತ ಹುರುಪಿನಿಂದ ಎತ್ತುಗಳನ್ನು ಓಡಿಸಿ ಖುಷಿಪಟ್ಟರು. ಹೋರಿ ಬೆದರಿಸೋ ಸ್ಪರ್ಧೆ ಕೆಲವರಿಗೆ ಮನರಂಜನೆ ನೀಡಿದರೆ, ಕೆಲವರನ್ನ ಸಂಕಷ್ಟಕ್ಕೆ ದೂಡಿದೆ.