ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನದ್ದು 60% ಕಮಿಷನ್ ಸರ್ಕಾರ ಎಂದ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂಪಾಯಿ ಹಗರಣ ನಡೆದಿದೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾವಣೆಗೆ ಹೋಗಿದೆ. ಸಿಎಂ ಸಿದ್ದರಾಮಯ್ಯನವರ ಜೀವನ ತೆರೆದ ಪುಸ್ತಕದಂತೆ ಅಂತಾರೆ. ಆದರೆ ಈಗ ಒಬ್ಬೊಬ್ಬ ಮಂತ್ರಿಯ ದರೋಡೆಯ ಪುಸ್ತಕ ಹೊರಗೆ ಬರುತ್ತಿದೆ. ಕಪ್ಪು ಚುಕ್ಕೆ ಇಲ್ಲವೆಂದು ಸಿದ್ದರಾಮಯ್ಯ ಹೇಳ್ತಾನೇ ಇರ್ತಾರೆ. ಆದರೆ ತಪ್ಪು ಮಾಡದಿದ್ದರೆ 14 ಸೈಟ್ ಯಾಕೆ ವಾಪಸ್ ಕೊಟ್ಟಿದ್ರಿ ಎಂದು ಪ್ರಶ್ನಿಸಿದರು. ನಾನು ಸೈಟ್ ವಾಪಸ್ ಕೊಡಲ್ಲ ಎಂದವರು, ನನ್ನ ಹೆಂಡತಿ ಗೊತ್ತಿಲ್ಲದೇ ಕೊಟ್ರು ಅಂತಾರೆ. ಸಿದ್ದರಾಮಯ್ಯಗೆ ಹಿಂದುಳಿದ ನಾಯಕ ಎಂಬುವುದನ್ನುತೆಗೆದು, ಮುಸಲ್ಮಾನರ ಚಾಂಪಿಯನ್ ಸಿದ್ದರಾಮಯ್ಯ ಎನ್ನಬೇಕು ಎಂದು ಕಿಡಿಕಾರಿದರು.
ಇನ್ನೂ ನಮ್ಮ ಮೇಲಿದ್ದ 40 ಪರ್ಸೆಂಟ್ ಆರೋಪದಿಂದ ಮುಕ್ತರಾಗಿದ್ದೇವೆ. ಟೂಲ್ ಕಿಟ್ನಂತ ಕೆಂಪಣ್ಣರನ್ನು ಕಾಂಗ್ರೆಸ್ ಬಳಸಿಕೊಂಡಿತ್ತು. ಕೆಂಪಣ್ಣ, ಪದ್ಮರಾಜ್ನನ್ನು ಟೂಲ್ಕಿಟ್ನಂತೆ ಬಳಸಿಕೊಂಡು, ನಿರುದ್ಯೋಗಿ ಗುತ್ತಿಗೆದಾರರು ಸೇರಿಕೊಂಡು ಆರೋಪ ಮಾಡಿದ್ರು. ನಮ್ಮ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ರು. ಕೋವಿಡ್ ಹಗರಣ ನಡೆದಿದೆ ಅಂತಲೂ ಅವರೇ ಹೇಳುತ್ತಿದ್ದಾರೆ. 40% ಆರೋಪವನ್ನು 16 ತಿಂಗಳು ಕಳೆದ್ರೂ ಸಾಬೀತು ಮಾಡಿಲ್ಲ. ಕೋರ್ಟಿಗೂ ದಾಖಲೆ ಕೊಟ್ಟಿಲ್ಲ, ವಿಚಾರಣೆಗೂ ಹಾಜರಾಗಿಲ್ಲ. ಪ್ರಕರಣವನ್ನೇ ಲೋಕಾಯುಕ್ತ ವಜಾ ಮಾಡಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ರು.