ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾಹಾಗೂ ತಮಿಳಿನ ಸ್ಟಾರ್ ನಟ ಧನುಷ್ ನಡುವಿನ ಮನಸ್ತಾಪ ಪಬ್ಲಿಕ್ ಆಗಿದೆ. ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ವಿವಾದದ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ. ನಟ ಧನುಷ್ ಅವರ ನೀಚ ಬುದ್ದಿಯಿಂದಾಗಿ ನಾವು ಸಾಕ್ಷ್ಯಚಿತ್ರವನ್ನು 2 ವರ್ಷಗಳಿಂದ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರ ಒಂದು ಅನುಮತಿಗಾಗಿ ಕಾಯುತ್ತಲೇ ಇದ್ದೆ. ಆದ್ರೆ ಧನುಷ್ ಅನುಮತಿ ನೀಡಲು 10 ಕೋಟಿ ಕೇಳಿದ್ರು ಎಂಬ ವಿಚಾರವನ್ನು ನಯನತಾರಾ ಬಯಲು ಮಾಡಿದ್ದಾರೆ.
ಧನುಷ್ ಅನುಮತಿ ನೀಡದಿದ್ದಾಗ 2015ರಲ್ಲಿ ತೆರೆಕಂಡ ‘ನಾನುಮ್ ರೌಡಿ ದಾ’ ಚಿತ್ರದ ಹಾಡನ್ನು ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ನಲ್ಲಿ ಡಿಲೀಟ್ ಮಾಡಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಸುದೀರ್ಘ ಪತ್ರ ಬರೆಯುವ ಮೂಲಕ ನಟಿ ನಯನತಾರಾ ಧನುಷ್ ಮೇಲಿನ ಕೋಪವನ್ನು ಹೊರ ಹಾಕಿದ್ದಾರೆ.
ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ನಲ್ಲಿ ‘ನಾನುಮ್ ರೌಡಿ ದಾ ’ ಸಿನಿಮಾದ ಒಂದು ಹಾಡನ್ನು ಬಳಸಲಾಗಿತ್ತು. ಧನುಷ್ ಈ ಚಿತ್ರದ ನಿರ್ಮಾಪಕರಾಗಿದ್ದರು. ಸಾಕ್ಷ್ಯಚಿತ್ರದಲ್ಲಿ ಈ ಹಾಡನ್ನು ಬಳಸಲು ಅನುಮತಿ ನೀಡಲು ನಟ ಧನುಷ್ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ನಯನತಾರಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಬಿಟಿಎಸ್ ಸಾಕ್ಷ್ಯಚಿತ್ರದಲ್ಲಿ ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ರು ಎಂದು ನಯನತಾರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಸಿನಿಮಾದಲ್ಲಿ ಯಾವುದೇ ಹಿನ್ನೆಲೆಯಿಲ್ಲದ ಒಂಟಿ ಮಹಿಳೆಯಾಗಿ, ನಾನು ಸವಾಲಿನ ಚಿತ್ರರಂಗಕ್ಕೆ ಬಂದಿದ್ದೇನೆ ಮತ್ತು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಈ ಮಟ್ಟಕ್ಕೆ ಬಂದಿದ್ದೇನೆ. ನನ್ನನ್ನು ಪ್ರೀತಿಸುವ ನನ್ನ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ನನ್ನ ಜರ್ನಿ ಬಗ್ಗೆ ಚೆನ್ನಾಗಿ ತಿಳಿದಿದೆ. ಹಲವು ವರ್ಷಗಳಿಂದ ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿಗಳ ಬಗ್ಗೆ ನಾನು ಈಗ ಧೈರ್ಯದಿಂದ ಬಹಿರಂಗಪಡಿಸಲು ಬಯಸುತ್ತೇನೆ ಎಂದು ನಯನತಾರಾ ಪತ್ರದಲ್ಲಿ ಬರೆದಿದ್ರು.
ಹಲವು ಅಡೆತಡೆಗಳನ್ನು ದಾಟಿ ಈ ಸಾಕ್ಷ್ಯಚಿತ್ರವನ್ನು ಸ್ಟ್ರೀಮಿಂಗ್ ಮಾಡಲು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ, ನಾವು ಈಗ ಬಿಡುಗಡೆಗೆ ಸಿದ್ಧರಾಗಿದ್ದೇವೆ. ಆದರೆ ಈಗ ನಿಮ್ಮ ಪ್ರತೀಕಾರದ ವರ್ತನೆ ನನ್ನ ಗಂಡನ ಮೇಲೆ ಮಾತ್ರವಲ್ಲದೆ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಮೇಲೂ ಬಿದ್ದಿದೆ. ಪ್ರೀತಿ ಮತ್ತು ಮದುವೆ ಸೇರಿದಂತೆ ನನ್ನ ಜೀವನದ ಸಂತೋಷದ ಕ್ಷಣಗಳ ಈ ಸಾಕ್ಷ್ಯಚಿತ್ರದಲ್ಲಿ ಸಿಹಿ ನೆನಪುಗಳನ್ನು ಸೆರೆಹಿಡಿಯಲು ವಿವಿಧ ಸಿನಿಮಾಗಳ ದೃಶ್ಯಗಳನ್ನು ಬಳಸಲು ಹಲವರು ತಕ್ಷಣ ಒಪ್ಪಿಕೊಂಡರು. ಆದ್ರೆ ನಾನುಮ್ ರೌಡಿ ದಾ ಸಿನಿಮಾ ಹಾಡಿಗೆ ಧನುಷ್ ಅನುಮತಿ ನಿರಾಕರಿಸಲು 2 ವರ್ಷ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ರು.
ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ನಲ್ಲಿ ಬಳಸಲಾದ 3 ಸೆಕೆಂಡ್ಗಳ ವೀಡಿಯೊವನ್ನು ಲೀಗಲ್ ನೋಟಿಸ್ ಕಳುಹಿಸಿರುವುದನ್ನು ನೋಡಿ ಆಘಾತವಾಯಿತು. ಮೇಲಾಗಿ ಈಗಾಗಲೇ ವೆಬ್ಸೈಟ್ಗಳಲ್ಲಿ ಹಂಚಿಕೊಂಡಿರುವ ಖಾಸಗಿಯಾಗಿ ಚಿತ್ರೀಕರಿಸಿದ ದೃಶ್ಯಕ್ಕೆ ₹10,00,00,000 (ಹತ್ತು ಕೋಟಿ) ಪರಿಹಾರವನ್ನು ಕೇಳುವುದು ತುಂಬಾ ವಿಚಿತ್ರವಾಗಿದೆ. ಈ ಕೆಲಸ ನೀವು ಎಂಥಹ ವ್ಯಕ್ತಿ ಎಂಬುದನ್ನು ತೋರಿಸುತ್ತದೆ ಎಂದು ನಯನತಾರಾ ಪತ್ರದ ಮೂಲಕ ಧನುಷ್ ಕಿಡಿಕಾರಿದ್ದಾರೆ.