ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಮತ ಪ್ರಚಾರ ನಡೆಸಿದ್ದಾರೆ. ತಮ್ಮ ಪ್ರಚಾರದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಪ್ರಧಾನಿ ಮೋದಿ ಮತ್ತು ಬಿಜೆಪಿಗರ ವಿರುದ್ಧ ಕಿಡಿ ಕಾರಿದ್ರು. ಚುನಾವಣಾ ಪ್ರಚಾರದ ಬಳಿಕ ಸೋಲಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ. ಅವರ ಆರೋಪ ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ ಅಂತ ಸವಾಲು ಹಾಕಿದ್ದೀನಿ. ಆದರೆ ಮೋದಿ ಏಕೆ ನನ್ನ ಸವಾಲು ಸ್ವೀಕರಿಸುತ್ತಿಲ್ಲ, ಏನು ಭಯ ಅವರಿಗೆ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಬಗ್ಗೆ ಸಿಎಂ ಮಾತು
ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಯಶಸ್ವಿಯಾಗಿ ರಾಜ್ಯದ ಜನರ ಮನೆ ಮನೆ ತಲುಪಿದೆ. ಶಕ್ತಿ ಯೋಜನೆಯಲ್ಲಿ325 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಗೃಹಜ್ಯೋತಿಯಡಿ ಒಂದು ಕೋಟಿ 62 ಸಾವಿರ ಕುಟುಂಬಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನಭಾಗ್ಯದಡಿ ಒಂದು ಕೋಟಿ 20 ಸಾವಿರ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ. ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು 2000 ರೂಪಾಯಿ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಸರ್ಕಾರ ಬಂದ 8 ತಿಂಗಳೊಳಗೆ ಇದೂ ಸೇರಿ ಎಲ್ಲಾ ಐದು ಗ್ಯಾರಂಟಿಗಳು ಆರಂಭವಾಗಿದ್ದು ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲಮೋ ಹೊಂದಿರುವವರು ಯುವನಿಧಿ ಅಡಿಯಲ್ಲಿ ಭತ್ಯೆ ಪಡೆಯುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದರು.
ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಬಿಜೆಪಿಯ ಮಂತ್ರಿಗಳು ಕರ್ನಾಟಕಕ್ಕೆ ಬಂದು ಪರೀಕ್ಷಿಸಲಿ, ಇದು ಸುಳ್ಳಾದ್ರೆ ನಾನು ರಾಜಕೀಯ ನಿವೃತ್ತಿ ತಗೊತೀನಿ. ನಿಜ ಆಗಿದ್ರೆ ನೀವು ಮಹಾರಾಷ್ಟ್ರ ಜನತೆಯ ಕ್ಷಮೆ ಕೋರಿ ರಾಜಕೀಯ ನಿವೃತ್ತಿ ಘೋಷಿಸ್ತೀರಾ ಎಂದು ಸವಾಲ್ ಎಸೆದರು. ನಮ್ಮ ಸರ್ಕಾರದ ವಿರುದ್ಧ ಪುಟಗಟ್ಟಲೆ ಸುಳ್ಳು ಜಾಹೀರಾತು ನೀಡಿರುವ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದೇವೆ ಎಂದರು. ಇದೇ ವೇಳೆ ಕರ್ನಾಟಕ ಪ್ರತೀ ವರ್ಷ 4 ಲಕ್ಷ 50 ಸಾವಿರ ಕೋಟಿಯಷ್ಟು ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸಿದರೆ ವಾಪಾಸ್ ರಾಜ್ಯಕ್ಕೆ ಬರುತ್ತಿರುವುದು 60 ಸಾವಿರ ಕೋಟಿ ರೂಪಾಯಿ ಮಾತ್ರ ಬರುತ್ತಿದೆ ಎಂದು, ಕೇಂದ್ರದ ಮೋದಿ ಸರ್ಕಾರ ತೆರಿಗೆ ವಿಚಾರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದ್ರು.