ಬೆಂಗಳೂರು: ತಮ್ಮ ಜೊತೆಗೆ ಅನುಚಿತ ವರ್ತನೆ ತೋರಿದ್ದಾರೆ ಎಂದು ದರ್ಶನ್ ಅಭಿಮಾನಿಗಳ ವಿರುದ್ಧ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ದೂರು ನೀಡಿದ್ದಾರೆ. ನಿನ್ನೆ ದರ್ಶನ್ ಫ್ಯಾನ್ಸ್ ಹೋಟೆಲ್ ವೊಂದರಲ್ಲಿ ತನ್ನನ್ನು ನಿಂದಿಸಿದ್ದಾರೆಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಥಮ್ ಮಾಗಡಿ ರಸ್ತೆಯ ಡಿಸಿಪಿ ಕಚೇರಿಗೆ ಭೇಟಿ ನೀಡಿ, ಡಿಸಿಪಿ ಗಿರೀಶ್ ಅವರಿಗೆ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಪ್ರಥಮ್, ಗೂಂಡಾಗಳ ವಿರುದ್ಧ ದೂರು ದಾಖಲಿಸಿದ್ದೇನೆ. ನಿನ್ನೆ ಹೊಟೇಲ್ ವೊಂದರಲ್ಲಿ ದರ್ಶನ್ ಅವರ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತೋರಿದರು. ಡಿಸಿಪಿ ಗಿರೀಶ್ ಅವರು ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದರು. ಇನ್ನು ಕೆಲವೇ ಹೊತ್ತಲ್ಲಿ ತಪ್ಪು ಮಾಡಿದವರು ಒಳಗೆ ಹೋಗುತ್ತಾರೆ. ಅವರಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ನಿನ್ನೆ ಹೋಟೆಲ್ ಗೆ ಹೋಗಿದ್ದಾಗ, ನನ್ನ ಬಳಿ ಏಕಾಏಕಿ ಬಂದು ಜೈ ಡಿಬಾಸ್ ಅಂತಾ ಕೂಗಿ ಎಂದು ಗಲಾಟೆ ಮಾಡಿದರು. ಅಲ್ಲದೇ ಅಶ್ಲೀಲ ಪದ ಬಳಸಿ ಕೈ ಮಿಲಾಯಿಸೋಕೆ ಯತ್ನಿಸಿದರು. ನಂತರ ಹೋಟೆಲ್ ನ 8 ಜನ ಬೌನ್ಸರ್ ಆ ಗೂಂಡಾಗಳನ್ನು ಹೊರಗೆ ತಳ್ಳಿದ್ದರು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.