ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯಾ ದಾಳಿಯ ಡ್ರೋನ್ ಗಳನ್ನು ಉತ್ಪಾದಿಸುವಂತೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆದೇಶಿಸಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಕೆಸಿಎನ್ಎ ವರದಿಯಲ್ಲಿ ಉಲ್ಲೇಖಿಸಿದೆ.
ನೆಲದ ಮೇಲಿನ ಹಾಗೂ ಸಮುದ್ರದ ಮೇಲಿನ ಗುರಿಗೆ ಪ್ರಹಾರ ನೀಡಲು ವಿನ್ಯಾಸಗೊಳಿಸಿರುವ ನೂತನ ಡ್ರೋನ್ ಗಳ ಪ್ರಯೋಗಾರ್ಥ ಪರೀಕ್ಷೆಯನ್ನು ವೀಕ್ಷಿಸಿದ ಬಳಿಕ ಅಧ್ಯಕ್ಷ ಕಿಮ್ ಜಾಂಗ್ ಉನ್ ` ಇಂತಹ ಡ್ರೋನ್ ಗಳನ್ನು ಸಾಧ್ಯವಾದಷ್ಟು ಬೇಗ ದೊಡ್ಡ ಮಟ್ಟದಲ್ಲಿ ಉತ್ಪಾದಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆತ್ಮಹತ್ಯಾ ಡ್ರೋನ್ ಗಳು ಸ್ಫೋಟಕ ಸಾಗಿಸುವ ಮಾನವ ರಹಿತ ಡ್ರೋನ್ ಗಳಾಗಿದ್ದು ಉದ್ದೇಶಪೂರ್ವಕವಾಗಿ ಶತ್ರು ಗುರಿಗಳಿಗೆ ಅಪ್ಪಳಿಸಲು ವಿನ್ಯಾಸಗೊಳಿಸಲಾಗಿದೆ. ಇವು ಮಾರ್ಗದರ್ಶಿ ಕ್ಷಿಪಣಿಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಡ್ರೋನ್ ಗಳನ್ನು ಉತ್ತರ ಕೊರಿಯಾ ಮೊದಲ ಬಾರಿಗೆ ಆಗಸ್ಟ್ ನಲ್ಲಿ ಅನಾವರಣಗೊಳಿಸಿದ್ದು ಇದರ ತಂತ್ರಜ್ಞಾನವನ್ನು ರಶ್ಯ ಒದಗಿಸಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.
ಆತ್ಮಹತ್ಯಾ ದಾಳಿಯ ಡ್ರೋನ್ ಗಳು ವಿಭಿನ್ನ ದೂರ ಶ್ರೇಣಿಯ ವ್ಯಾಪ್ತಿಯಲ್ಲಿದ್ದು ನೆಲದ ಮೇಲಿನ ಅಥವಾ ಸಮುದ್ರದಲ್ಲಿನ ಶತ್ರುಗಳ ಗುರಿಯ ಮೇಲೆ ನಿಖರವಾಗಿ ಪ್ರಹಾರ ಮಾಡುವ ಸಾಮಥ್ರ್ಯ ಹೊಂದಿದೆ. ಡ್ರೋನ್ ಗಳು ತುಲನಾತ್ಮಕವಾಗಿ ಕಡಿಮೆ ಉತ್ಪಾದನಾ ವೆಚ್ಚ ಮತ್ತು ವಿಸ್ತಾರವಾದ ಅನ್ವಯಿಕೆಗಳ ಕಾರಣದಿಂದಾಗಿ ಸುಲಭವಾಗಿ ಬಳಸಬಹುದಾದ ಅಸ್ತ್ರವಾಗಿದೆ ಎಂದು ಕೆಸಿಎನ್ಎ ವರದಿ ಹೇಳಿದೆ.