ಮೈಸೂರು:- ಮುಡಾ ಹಗರಣವು ಬಗೆದಷ್ಟು ಬಯಲಾಗುತ್ತಿದೆ. 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 12 ನಿವೇಶನ ಹಂಚಿಕೆ ಮಾಡಿರೋದು ಬೆಳಕಿಗೆ ಬಂದಿದೆ.
ಮಹೇಂದ್ರ ಎಂಬುವವರಿಗೆ ಸೇರಿದ 2.22 ಎಕರೆ ಭೂಮಿ ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ, ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಎಂಬ ಮಾಹಿತಿ ಮುಡಾ ಬಳಿ ಇಲ್ಲವಂತೆ! ಆದಾಗ್ಯೂ ಅವರಿಗೆ 50-50 ಅನುಮಪಾತದಲ್ಲಿ ಸೈಟ್ಗಳನ್ನು ಹಂಚಿಕೆ ಮಾಡಲಾಗಿದೆ.
ದೇವನೂರು ಗ್ರಾಮದ ಸರ್ವೆ ನಂ. 81/2 ರಲ್ಲಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದರೆ ಯಾವಾಗ ಆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಮುಡಾ ಬಳಿ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3 ನೇ ಹಂತದಲ್ಲಿ ನಿವೇಶನಗಳನ್ನು ನೀಡಲಾಗಿದೆ.
ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆ. ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ಗಳು ಮಾತ್ರ. 40*60 ಮತ್ತು 40*30 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರಮುಖ ಪ್ರದೇಶದಲ್ಲೇ 19 ನಿವೇಶನ ನೀಡಲಾಗಿದೆ.
ಏತನ್ಮಧ್ಯೆ, ಮುಡಾ ಹಗರಣದ ಸುಳಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಿಗೂ ಸುತ್ತಿಕೊಂಡಿದೆ. ಒಂದು ಕಡೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ತನಿಖೆಯ ಕೊನೆಯ ಹಂತಕ್ಕೆ ಬಂದು ನಿಂತಿದ್ದರೆ, ಮತ್ತೊಂದು ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತಷ್ಟು ಜನರ ವಿಚಾರಣೆ ಮಾಡಿದ್ದಾರೆ.