ಬ್ಯಾಂಕ್ ಖಾತೆಯಿಂದ ಕೆಲವೊಮ್ಮೆ ತಪ್ಪು ಖಾತೆಗೆ ಅಥವಾ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗುತ್ತದೆ. ಬ್ಯಾಂಕಿಂಗ್ ವಂಚನೆಯಲ್ಲಿಯೂ ಇದೇ ರೀತಿ ಸಂಭವಿಸುತ್ತದೆ. ಈಗ ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ಗಳ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಯುತ್ತಿದ್ದರೂ ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಆಗಿರುವ ಉದಾಹರಣೆ ಅನೇಕವಿದೆ. ಹೀಗೆ ಒಂದು ವೇಳೆ ಹಣ ವರ್ಗಾವಣೆ ತಪ್ಪಾಗಿ ಮಾಡಿದರೆ ಏನು ಮಾಡಬೇಕು? ನಮ್ಮ ಹಣವನ್ನು ಹೇಗೆ ವಾಪಸ್ ಪಡೆಯಬೇಕು?. ಇಲ್ಲಿದೆ ನೋಡಿ ಮಾಹಿತಿ.
ಯುಪಿಐ ಮೂಲಕ ನಿಮ್ಮಿಂದ ತಪ್ಪಾಗಿ ಹಣ ಪಾವತಿಯಾದರೆ ಪರಿಹಾರಕ್ಕಾಗಿ ಇಲ್ಲಿ ನೀಡಿರುವ ಕೆಲವು ಕ್ರಮಗಳನ್ನು ಅನುಸರಿಸಿ. ಮೊದಲು ಬಳಸಿರುವ ಪಾವತಿ ವ್ಯವಸ್ಥೆಗೆ ದೂರು ಸಲ್ಲಿಸಿ. ಯುಪಿಐ ವಹಿವಾಟುಗಳಿಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪೋರ್ಟಲ್ನಲ್ಲಿ ದೂರು ಸಲ್ಲಿಸಬಹುದು.
ಎನ್ಪಿಸಿಐ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ‘ವಿವಾದ ಪರಿಹಾರ ಕಾರ್ಯವಿಧಾನ’ ವಿಭಾಗಕ್ಕೆ ಹೋಗಿ ಅಲ್ಲಿ, ‘ದೂರು’ ಟ್ಯಾಬ್ ಅಡಿಯಲ್ಲಿ ಅಗತ್ಯವಿರುವ ವಿವರಗಳನ್ನು ಹಾಕಿ ಆನ್ಲೈನ್ ಮೂಲಕ ದೂರು ಅರ್ಜಿ ಸಲ್ಲಿಸಿ.
ಇದರಲ್ಲಿ ಯುಪಿಐ ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ಎಷ್ಟು ಮೊತ್ತ ವರ್ಗಾಯಿಸಲಾಗಿದೆ, ವಹಿವಾಟಿನ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಜೊತೆಗೆ ಕಡಿತವನ್ನು ತೋರಿಸುವ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ.
ಫಾರ್ಮ್ ಅನ್ನು ಭರ್ತಿ ಮಾಡುವಾಗ ದೂರಿಗೆ ಕಾರಣವಾಗಿ ‘ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ’ ಎಂಬುದನ್ನು ಆಯ್ಕೆ ಮಾಡಬೇಕು.
ಎನ್ಪಿಸಿಐ ವೆಬ್ಸೈಟ್ನ ಪ್ರಕಾರ ದೂರುಗಳನ್ನು ಮೊದಲು ಪಿಎಸ್ಪಿ ಬ್ಯಾಂಕ್ ಅಥವಾ ಯುಪಿಐ ವಹಿವಾಟಿನ ಟಿಪಿಎಪಿ ಬೋರ್ಡ್ನಲ್ಲಿ ಮೊದಲು ದೂರನ್ನು ಸಲ್ಲಿಸಲಾಗುತ್ತದೆ. ಇಲ್ಲಿ ದೂರುಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಸಮಸ್ಯೆ ಪರಿಹಾರವಾಗದೇ ಇದ್ದರೆ ಪಿಎಸ್ಪಿ ಬ್ಯಾಂಕ್ ಇದನ್ನು ಪರಿಶೀಲಿಸಲಿದೆ.
ಕೊನೆಯ ಆಯ್ಕೆಯಾಗಿ ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್ಮನ್ ಅಥವಾ ಡಿಜಿಟಲ್ ದೂರುಗಳಿಗಾಗಿ ಒಂಬುಡ್ಸ್ಮನ್ ಅವರನ್ನು ಸಂಪರ್ಕಿಸಬಹುದು. ಇಲ್ಲಿ ಗ್ರಾಹಕರೊಂದಿಗೆ ನೇರವಾಗಿ ಮಾತುಕತೆ ನಡೆಸಲಾಗುತ್ತದೆ ಮತ್ತು ದೂರಿನ ಸ್ಥಿತಿಗತಿಯ ಬಗ್ಗೆ ಗ್ರಾಹಕರಿಗೆ ವಿವರಿಸಲಾಗುತ್ತದೆ.
ಆರ್ಬಿಐ ಒಂಬುಡ್ಸ್ಮನ್
ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ವಹಿವಾಟುಗಳಿಗಾಗಿ ಅಧಿಕಾರಿಯನ್ನು ನೇಮಿಸಿದ್ದು, ಇವರು ಡಿಜಿಟಲ್ ಪಾವತಿ ವ್ಯವಸ್ಥೆಯ ದೂರುಗಳನ್ನು ನಿರ್ವಹಿಸುತ್ತಾರೆ.
ಆರ್ಬಿಐ ಒಂಬುಡ್ಸ್ಮನ್ಗೆ ದೂರು ಯಾವಾಗ ದಾಖಲಿಸಬೇಕು?
ಒಂದು ತಿಂಗಳ ಅನಂತರವೂ ನಿಮ್ಮ ದೂರು ಇತ್ಯರ್ಥವಾಗದೇ ಉಳಿದಿದ್ದರೆ ಅಥವಾ ಪ್ರತಿಕ್ರಿಯೆಯಿಂದ ನೀವು ಅತೃಪ್ತರಾಗಿದ್ದರೆ ಡಿಜಿಟಲ್ ವಹಿವಾಟುಗಳಿಗಾಗಿ ಆರ್ಬಿಐ ಒಂಬುಡ್ಸ್ಮನ್ಗೆ ನೇರವಾಗಿ ದೂರು ಸಲ್ಲಿಸಬಹುದು. ಇದಕ್ಕಾಗಿ ಬ್ಯಾಂಕ್ ಶಾಖೆ ಅಥವಾ ಕಚೇರಿ ಇರುವ ನ್ಯಾಯ ವ್ಯಾಪ್ತಿಯಲ್ಲಿ ದೂರುಗಳನ್ನು ಸಲ್ಲಿಸಬೇಕು ಅಥವಾ ಕೇಂದ್ರೀಕೃತ ಕಾರ್ಯಾಚರಣೆಗಳಿಗಾಗಿ ಗ್ರಾಹಕರ ವಿಳಾಸವನ್ನು ನೋಂದಾಯಿಸಲಾಗುತ್ತದೆ.
ಈ ಹಂತಗಳನ್ನು ಅನುಸರಿಸುವ ಮೂಲಕ ಅನಪೇಕ್ಷಿತ ಡಿಜಿಟಲ್ ಪಾವತಿ ದೋಷಗಳಿಗೆ ಪರಿಹಾರವನ್ನು ಪಡೆಯಬಹುದು ಮತ್ತು ಅಂತಹ ತಪ್ಪುಗಳ ಮೂಲಕ ಕಳೆದುಹೋದ ಹಣವನ್ನು ಮರಳಿ ಪಡೆಯಬಹುದು.