ಟಿಬಿ, ಕೆಮ್ಮು, ರಕ್ತಹೀನತೆ ಮತ್ತು ಬೆನ್ನು–ಮೊಣಕಾಲು ನೋವನ್ನು ಗುಣಪಡಿಸಲು ಬಳಸುವ ಕ್ಯಾಟರ್ಪಿಲ್ಲರ್ ಫಂಗಸ್ ಅಥವಾ ಶಿಲೀಂಧ್ರವನ್ನು ಇದೀಗ ಗಂಭೀರ ಕಾಯಿಲೆಗೂ ಬಳಸಲಾಗುತ್ತದೆ. ಕಾರ್ಡಿಸೆಪ್ಸ್ ಎಂದು ಕರೆಯಲ್ಪಡುವ ಕ್ಯಾಟರ್ಪಿಲ್ಲರ್ ಅಥವಾ ಹುಳುಗಳ ಮೇಲೆ ಬೆಳೆಯುವ ಆರೆಂಜ್ ಜೊಂಬಿ ಫಂಗಸ್ ಅನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಬಹುದು ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ.
ಕಾರ್ಡಿಸೆಪ್ಸ್ ಎಂಬ ಶಿಲೀಂಧ್ರವು ಕ್ಯಾನ್ಸರ್ ಕೋಶಗಳಲ್ಲಿ ಅತಿಯಾದ ಕೋಶ ಬೆಳವಣಿಗೆಯ ಸಂಕೇತಗಳನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೊಸ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಹುಳುಗಳ ಮೇಲೆ ಬೆಳೆಯುವ ಶಿಲೀಂಧ್ರವನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಬಹುದು. ಕೀಮೋಥೆರಪಿ ಮತ್ತು ವಿಕಿರಣದಂತಹ ಪರ್ಯಾಯಗಳಿಗಿಂತ ರೋಗಿಗಳಿಗೆ ಕಡಿಮೆ ಹಾನಿಕಾರಕ ಚಿಕಿತ್ಸೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
FEBS ಲೆಟರ್ಸ್ನಲ್ಲಿ ಪ್ರಕಟವಾದ ಸಂಶೋಧನೆಯು ಕಾರ್ಡಿಸೆಪಿನ್ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಸಂಕೇತಗಳನ್ನು ಅಡ್ಡಿಪಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಈ ಕಿತ್ತಳೆ ಬಣ್ಣದ ಜೊಂಬಿ ಶಿಲೀಂಧ್ರವನ್ನು ಸಾಂಪ್ರದಾಯಿಕ ಏಷ್ಯನ್ ಔಷಧದಲ್ಲಿ ದೀರ್ಘಕಾಲ ಬಳಸಲಾಗಿದೆ. ಆದರೆ ಈಗ ಸಂಶೋಧಕರು ಅದರ ಕ್ಯಾನ್ಸರ್–ಹೋರಾಟದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.
ನಾರ್ಥಾಂಪ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರ್ಮಸಿಯ ತಂಡವು ಸಾವಿರಾರು ಜೀನ್ಗಳ ಮೇಲೆ ಕಾರ್ಡಿಸೆಪಿನ್ ಪರಿಣಾಮವನ್ನು ಅಧ್ಯಯನ ಮಾಡಿದೆ ಮತ್ತು ಇದು ಕಾರ್ಡಿಸೆಪಿನ್ ಟ್ರೈಫಾಸ್ಫೇಟ್ ಆಗಿ ಪರಿವರ್ತನೆಗೊಂಡಿದೆ ಎಂದು ಕಂಡುಹಿಡಿದಿದೆ. ಅಷ್ಟೇ ಅಲ್ಲದೆ ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಹಿಡಿದಿದೆ. ಈ ಕುರಿತು ಲೇಖಕಿ ಡಾ.ಕಾರ್ನೇಲಿಯಾ ಡಿ ಮೂರ್ ಮಾತನಾಡಿ, ಹಲವು ವರ್ಷಗಳಿಂದ ಕಾರ್ಡಿಸೆಪಿನ್ ವಿವಿಧ ಕಾಯಿಲೆಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಪ್ರತಿ ಹಂತದಲ್ಲೂ ನಾವು ಅದನ್ನು ಪರಿಣಾಮಕಾರಿ ಚಿಕಿತ್ಸೆಯಾಗಿ ಹೇಗೆ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹತ್ತಿರವಾಗುತ್ತಿದ್ದೇವೆ ಎಂದಿದ್ದಾರೆ.
ಕಾರ್ಡಿಸೆಪಿನ್ ಅನ್ನು ಕ್ಯಾನ್ಸರ್ ಔಷಧಿಯಾಗಿ ಬಳಸಬಹುದು ಎಂದು ಡೇಟಾ ದೃಢಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಲ್ಲಿ ಮಾರಣಾಂತಿಕ ಶಿಲೀಂಧ್ರ ರೋಗಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ನಂಬಿದ್ದಾರೆ. ಆದರೂ, ಕಾರ್ಡಿಸೆಪ್ಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿಯಲ್ಲಿ ಸೇರಿಸಿಲ್ಲ.