ರಾಂಚಿ: ಜಾರ್ಖಂಡ್ ನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಮೊದಲ ಸುತ್ತಿನಲ್ಲಿ 15 ಜಿಲ್ಲೆಗಳ 43 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 683 ಅಭ್ಯರ್ಥಿಗಳು ಅಖಾಡದಲ್ಲಿದ್ದು, 1.37 ಕೋಟಿ ಮಂದಿ ಮತದಾರರು ಅವರ ಭವಿಷ್ಯ ನಿರ್ಧರಿಸಲಿದ್ದಾರೆ.
ಮೊದಲ ಸುತ್ತಿನಲ್ಲಿ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ಆರು ಸ್ಥಾನಗಳು, ಫಲಮು, ಪಶ್ಚಿಮ ಸಿಂಗ್ಭೂಮ್ ಮತ್ತು ರಾಂಚಿ ಜಿಲ್ಲೆಗಳಲ್ಲಿ ತಲಾ ಐದು ವಿಧಾನಸಭಾ ಕ್ಷೇತ್ರಗಳಿವೆ. ಕೊಡೆರ್ಮಾ, ರಾಮಗಢ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವಿದೆ. ಮೊದಲ ಹಂತದಲ್ಲಿ ಒಟ್ಟು 43 ಸ್ಥಾನಗಳ ಪೈಕಿ ಜೆಎಂಎಂ 23 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (RJD) ಒಟ್ಟು ಐದು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಎನ್ಡಿಎಯಲ್ಲಿ ಬಿಜೆಪಿ 43ರಲ್ಲಿ 36 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದ ಚುನಾವಣಾ ಅಖಾಡದಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್, ಆರೋಗ್ಯ ಸಚಿವ ಬನ್ನಾ ಗುಪ್ತಾ, ಸಂಸದ ಮಹುವಾ ಮಜಿ, ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಮತ್ತು ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಕಣಕ್ಕಿಳಿದಿದ್ದು, ಈ ಕ್ಷೇತ್ರಗಳು ಕುತೂಹಲ ಕೆರಳಿಸಿವೆ. ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 225 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ.