ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ವಿಟಮಿನ್ಗಳು ಮತ್ತು ಪೊಟ್ಯಾಸಿಯಮ್ ದೇಹಕ್ಕೆ ಅವಶ್ಯಕವಾಗಿದೆ ಮತ್ತು ಆದ್ದರಿಂದ ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು. ಆದರೆ ಮಾರುಕಟ್ಟೆಯಿಂದ ತಂದ ಬಾಳೆಹಣ್ಣು ಗಳನ್ನು ಹೆಚ್ಚು ದಿನಗಳ ಕಾಲ ಇಡುವುದಕ್ಕೆ ಆಗುವುದಿಲ್ಲ.
ಬೇಗನೇ ಹಣ್ಣಾಗಿ ಕೊಳೆತು ಹೋಗುತ್ತದೆ. ಹೆಚ್ಚು ದಿನಗಳ ಕಾಲ ಬಾಳೆಹಣ್ಣನ್ನು ಇಟ್ಟರೆ ಕಾಂಡ ಭಾಗ ಮೊದಲು ಕೊಳೆಯಲು ಶುರುವಾಗಿ, ಹಣ್ಣು ಕಪ್ಪಾಗುತ್ತದೆ. ಬಾಳೆ ಹಣ್ಣನ್ನು ಕಪ್ಪಾಗದಂತೆ ಇಡೋದು ಒಂದು ಸವಾಲು ಎನ್ನುವವರಿಗೆ ಒಂದಿಷ್ಟು ಸಲಹೆ ಇಲ್ಲಿದೆ.
ಬಾಳೆ ಹಣ್ಣು ಕಪ್ಪಾಗದಂತೆ ಏನು ಮಾಡ್ಬೇಕು? :
- ಬಾಳೆ ಹಣ್ಣು ಬೇಗ ಕಪ್ಪಾಗಬಾರದು ಅಂದ್ರೆ ನಿಮ್ಮ ಮೊದಲ ಸ್ಟೆಪ್ ಖರೀದಿಯಲ್ಲಿ ಎಚ್ಚರಿಕೆ. ನೀವು ಬಾಳೆ ಹಣ್ಣನ್ನು ಖರೀದಿ (Purchase) ಮಾಡುವ ಸಮಯದಲ್ಲಿ ಸರಿಯಾಗಿ ಗಮನಿಸಿ. ಹೆಚ್ಚು ಬಲಿತ ಹಣ್ಣನ್ನು ಖರೀದಿ ಮಾಡಬೇಡಿ. ಒಂದ್ವೇಳೆ ಅಲ್ಲಲ್ಲಿ ಸಣ್ಣಗೆ ಕಪ್ಪಾ (Black) ಗಿದ್ದಲ್ಲಿ ಅದನ್ನು ಮನೆಗೆ ತರುವ ಪ್ರಯತ್ನಕ್ಕೆ ಕೈ ಹಾಕ್ಬೇಡಿ.
- ಅನೇಕರು ಪ್ಲಾಸ್ಟಿಕ್ (Plastic) ಚೀಲದಲ್ಲಿ ಬಾಳೆ ಹಣ್ಣನ್ನು ಮನೆಗೆ ತಂದು ಅದ್ರೊಳಗೆ ಹಣ್ಣನ್ನು ಇಡ್ತಾರೆ. ಇದು ತಪ್ಪು ವಿಧಾನ. ಮನೆಗೆ ಬಂದ ತಕ್ಷಣ ಪ್ಲಾಸ್ಟಿಕ್ ಕವರ್ ನಿಂದ ಬಾಳೆ ಹಣ್ಣನ್ನು ಹೊರತೆಗೆದು ಇಡಬೇಕು.
- ಬಾಳೆ ಕಾಂಡವನ್ನು ಪ್ಲಾಸ್ಟಿಕ್ನಿಂದ ಮುಚ್ಚುವ ಮೂಲಕ ದೀರ್ಘಕಾಲ ತಾಜಾವಾಗಿಡಬಹುದು. ಇದ್ರಿಂದ ಬಾಳೆ ಬೇಗ ಹಣ್ಣಾಗುವುದಿಲ್ಲ. ಒಂದು ಇಡೀ ಬಾಳೆಗೊನೆ ಅಥವಾ ಒಂದು ಗುಚ್ಚವನ್ನು ಪ್ಲಾಸ್ಟಿಕ್ ನಲ್ಲಿ ಮುಚ್ಚುವ ಬದಲು, ಒಂದೊಂದೇ ಬಾಳೆ ಹಣ್ಣಿನ ಕಾಂಡವನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್ ನಲ್ಲಿ ಸುತ್ತಬೇಕು. ಹೀಗೆ ಮಾಡಿದ್ರೆ ಬಾಳೆ ಹಣ್ಣು ನಿಧಾನವಾಗಿ ಬಲಿಯುತ್ತದೆ.
- ಹಣ್ಣುಗಳು ಎಥಿಲೀನ್ ಬಿಡುಗಡೆ ಮಾಡುತ್ತವೆ. ಇದು ಹಣ್ಣಾಗಲು ಕಾರಣವಾಗುತ್ತದೆ. ಹಾಗಾಗಿ ಯಾವುದೇ ಬಲಿತ ಹಣ್ಣಿನ ಜೊತೆ ಬಾಳೆ ಹಣ್ಣನ್ನು ಇಡಬೇಡಿ. ಅದು ಬೇಗ ಹಣ್ಣಾಗುವ ಸಾಧ್ಯತೆ ಹೆಚ್ಚಿರುತ್ತದೆ.
- ಬಾಳೆ ಹಣ್ಣನ್ನು ನೀವು ಫ್ರಿಜ್ ನಲ್ಲಿ ಇಡಬೇಡಿ. ಅದನ್ನು ಸಾಮಾನ್ಯ ಉಷ್ಣಾಂಶದಲ್ಲಿ ಇಡಿ. ಬಾಳೆ ಹಣ್ಣನ್ನು ತಲೆಕೆಳಗಾಗಿ ಇಡುವುದರಿಂದ ಅದು ಬೇಗ ಹಣ್ಣಾಗುವುದಿಲ್ಲ. ಅದನ್ನು ಒಂದ್ಕಡೆ ಒತ್ತಿಡಬೇಡಿ.
- ನೀವು ಇಡೀ ಬಾಳೆ ಹಣ್ಣಿನ ಗೊನೆಯನ್ನು ಮನೆಗೆ ತಂದಿದ್ದಲ್ಲಿ ಅದನ್ನು ನೇತು ಹಾಕುವುದು ಒಳ್ಳೆಯ ಮಾರ್ಗ. ಅಲ್ಲದೆ ಅದಕ್ಕೆ ನೀವು ಒಂದು ತೆಳುವಾದ ಬಟ್ಟೆಯನ್ನು ಮುಚ್ಚಬೇಕು.
- ನೀವು ಮನೆಗೆ ತಂದ ಬಾಳೆ ಹಣ್ಣೆಲ್ಲವೂ ಕೊಳೆಯಲು ಶುರುವಾದ್ರೆ ಅದಕ್ಕಿಂತ ಮೊದಲು ಫ್ರಿಜ್ ನಲ್ಲಿಡಿ. ಇಲ್ಲವೆ ಬಾಳೆ ಹಣ್ಣಿನ ಸಿಪ್ಪೆ ತೆಗೆದು, ಹಣ್ಣನ್ನು ಮಿಕ್ಸಿಗೆ ಹಾಕಿ ರುಬ್ಬಿ ಅದನ್ನು ಫ್ರೀಜರ್ ನಲ್ಲಿ ಇಡಬಹುದು. ರೊಟ್ಟಿ, ದೋಸೆ, ಕಡುಬು ಸೇರಿದಂತೆ ಬೇರೆ ಸಿಹಿ ಖಾದ್ಯ ಮಾಡುವಾಗ ಇದನ್ನು ಬಳಸಬಹುದು.