ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೆ ಇವೆ. ಕೆಲಸಕ್ಕೆ ಹೋದ ಮಹಿಳೆಯರು ತಾವು ಕೆಲಸ ಮಾಡುವ ಸ್ಥಳದಲ್ಲಿಯೇ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮಹಿಳಾ ಆಯೋಗ ಜಾರಿಗೆ ತಂದಿರುವ ಐಡಿಯಾ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಉತ್ತರಪ್ರದೇಶದ ಮಹಿಳಾ ಆಯೋಗ ಸರ್ಕಾರದ ಮುಂದೆ ಹಲವು ಪ್ರಸ್ತಾವನೆಗಳನ್ನು ಇಟ್ಟಿದೆ. ಮಹಿಳೆಯರನ್ನು ಕೆಟ್ಟ ಸ್ಪರ್ಶದಿಂದ ರಕ್ಷಿಸಲು ಮತ್ತು ಪುರುಷರ ಕೆಟ್ಟ ಉದ್ದೇಶಗಳನ್ನು ತಡೆಯಲು ಪ್ರಸ್ತಾವನೆ ನೀಡಿದೆ. ಲಕ್ನೋದಲ್ಲಿ ಅಕ್ಟೋಬರ್ 28ನೇ ತಾರೀಖು ನಡೆದ ಮಹಿಳಾ ಆಯೋಗದ ಸಭೆಯ ನಂತರ, ಒಂದಷ್ಟು ರೂಲ್ಸ್ ತರೋಕೆ ಆಯೋಗ ಮುಂದಾಗಿದೆ. ಬೊಟಿಕ್ ಮತ್ತು ಟೈಲರ್ ಶಾಪ್ಗಳಲ್ಲಿ ಪುರುಷರಿಗೆ ಮಹಿಳೆಯರ ಅಳತೆ ತೆಗೆದುಕೊಳ್ಳಲು ಅವಕಾಶ ನೀಡಬಾರದು. ಬ್ಯೂಟಿ ಪಾರ್ಲರ್ನಲ್ಲಿ ಪುರುಷರು ಮಹಿಳೆಯರ ಕೂದಲನ್ನು ಕತ್ತರಿಸಬಾರದು. ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿತ್ತು. ಪ್ರಸ್ತಾವನೆಯನ್ನು ಆಯೋಗದ ಅಧ್ಯಕ್ಷೆ ಬಬಿತಾ ಚೌಹಾಣ್ ಮಂಡಿಸಿದ್ದು ಇದಕ್ಕೆ ಸದಸ್ಯರು ಬೆಂಬಲ ಸೂಚಿಸಿದ್ದಾರೆ.
ಸಾರ್ವಜನಿಕ ಸ್ಥಳ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಯಲು ಮಹಿಳಾ ಆಯೋಗ ಈ ಪ್ಲಾನ್ ಮಾಡಿದೆ. ಈ ಪ್ರಕಾರ ಇನ್ಮುಂದೆ ಪುರುಷ ಟೈಲರ್ಗಳು ಮಹಿಳೆಯರ ಅಳತೆ ತೆಗೆದುಕೊಳ್ಳುವಂತಿಲ್ಲ. ಜಿಮ್ಗಳಲ್ಲಿ ಅಥವಾ ಯೋಗ ತರಬೇತಿ ಕೇಂದ್ರಗಳಲ್ಲಿ ಪುರುಷರು ಮಹಿಳೆಯರಿಗೆ ತರಬೇತಿ ನೀಡುವಂತಿಲ್ಲ. ಶಾಲಾ ಬಸ್ಗಳಲ್ಲಿ ಮಹಿಳಾ ಸಿಬ್ಬಂದಿ, ಬಟ್ಟೆ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿ ಇರುವಂತೆ ಶಿಫಾರಸು ಮಾಡಿದೆ.
ಮಹಿಳೆಯರು ಹೋಗುವ ಜಿಮ್ಗಳಲ್ಲಿ ಮಹಿಳಾ ತರಬೇತುದಾರರು ಇರಬೇಕು. ಎಲ್ಲಾ ಜಿಮ್ ತರಬೇತುದಾರರನ್ನ ಪೊಲೀಸ್ ಪರಿಶೀಲನೆ ನಡೆಸಬೇಕು. ಒಬ್ಬ ಮಹಿಳೆ ಪುರುಷ ತರಬೇತುದಾರರಿಂದ ತರಬೇತಿ ಪಡೆಯಲು ಬಯಸಿದರೆ, ಅವಳು ಅದನ್ನು ಲಿಖಿತವಾಗಿ ನೀಡಬೇಕು. ಏಕೆಂದರೆ, ಜಿಮ್ಗೆ ಹೋಗುವ ಮಹಿಳೆಯರು ಮತ್ತು ಯುವತಿಯರ ಶೋಷಣೆಯ ದೂರುಗಳು ಮಹಿಳಾ ಆಯೋಗಕ್ಕೆ ನಿರಂತರವಾಗಿ ಬರುತ್ತಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳು ಪ್ರಯಾಣಿಸುವ ಶಾಲಾ ಬಸ್ಗಳಲ್ಲಿ ಮಹಿಳಾ ಉದ್ಯೋಗಿಗಳಿರಬೇಕು. ಅಂತ ಮಹಿಳಾ ಆಯೋಗ ಎಲ್ಲ ಜಿಲ್ಲೆಗಳಿಗೂ ಈ ಸಂಬಂಧ ಆದೇಶ ನೀಡಿದೆ.
ಇನ್ನು ಜಿಮ್ನಲ್ಲಿ ಪೋಟೋಗಳನ್ನು ತೆಗೆದುಕೊಂಡು ಬ್ಲ್ಯಾಕ್ಮೇಲ್ ಮಾಡ್ತಾರೆ ಅನ್ನೋ ಆರೋಪಗಳು ಈಗ ಸಾಮಾನ್ಯವಾಗಿಬಿಟ್ಟಿದೆ. ಕೆಟ್ಟ ಸ್ಪರ್ಶಗಳೆಲ್ಲ ಮಹಿಳೆಯರಿಗೆ ಮುಜುಗರ ಉಂಟುಮಾಡುತ್ತದೆ. ಇದನ್ನೆಲ್ಲ ಮನೆಯಲ್ಲಿ ಹೇಳೋಣ ಅಂದ್ರೂ ಆಯ್ಕೆ ಇರಲ್ಲ. ಯಾಕಂದ್ರೆ ಜಿಮ್ಗೆ ಹೋಗಿ ಫಿಟ್ ಆಗಿರಲು ಮಹಿಳೆಯರು ಬಯಸುತ್ತಾರೆ. ಇದು ಅವರ ಅಧಿಕಾರ ಕೂಡ ಅಂತ , ಉತ್ತರ ಪ್ರದೇಶ ಮಹಿಳಾ ಆಯೋಗ ಅಧ್ಯಕ್ಷೆ ಬಬಿತಾ ಚೌಹಾನ್ ಹೇಳಿದ್ದಾರೆ.
ಸದ್ಯ ಈ ಎಲ್ಲಾ ಪ್ರಸ್ತಾವನೆಗಳನ್ನು ಮಹಿಳಾ ಆಯೋಗ ಸರ್ಕಾರ ಮುಂದಿಟ್ಟಿದೆ. ಸರ್ಕಾರದಿಂದ ಈ ಪ್ರಸ್ತಾವನೆಗಳು ಅನುಮೋದನೆಗೊಂಡರೆ ಅನುಷ್ಠಾನಕ್ಕಾಗಿ ಕರಡು ನೀತಿ ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಮುಂದೆ ಸಾಧಕ ಬಾಧಕಗಳನ್ನು ಚರ್ಚಿಸಿ ಕಾನೂನು ಮಾಡಲಾಗುತ್ತದೆ.