ಭಾರತೀಯ ಚಿತ್ರರಂಗದ ಸ್ಟಾರ್ ನಟ ಪ್ರಭಾಸ್ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ. ಅಳೆದು, ತೂಗಿ ಸಿನಿಮಾಗಳನ್ನು ಮಾಡುತ್ತಿರುವ ಪ್ರಭಾಸ್ ಇದೀಗ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಜೊತೆ ದೀರ್ಘ ಕಾಲದ ಒಪ್ಪಂದವೊಂದಕ್ಕೆ ಕೈ ಜೋಡಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಪ್ರಭಾಸ್ ಜೊತೆಗೆ ಮೂರು ಸಿನಿಮಾ ನಿರ್ಮಾಣ ಮಾಡಲು ಹೊಂಬಾಳೆ ಸಂಸ್ಥೆ ಮುಂದಾಗಿದ್ದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.
ಪ್ರಭಾಸ್ ನಟನೆಯ ಮೂರು ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅಂದರೆ 2026, 2027 ಹಾಗೂ 2028 ಕ್ಕೆ ತಲಾ ಒಂದೊಂದು ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡಲಿದೆ. ಅಥವಾ ಬಿಡುಗಡೆ ಮಾಡಲಿದೆ. ಪ್ರಭಾಸ್ ಹೀಗೆ, ಮುಂಚಿತವಾಗಿ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಸಿನಿಮಾ ಒಪ್ಪಂದ ಮಾಡಿಕೊಂಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ ಫಿಲಮ್ಸ್, ‘ರೆಬಲ್ ಸ್ಟಾರ್ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಭಾರತೀಯ ಸಿನಿಮಾದ ಸಾರವನ್ನು ಸಂಭ್ರಮಿಸುವ ಹಾಗೂ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಕೈಜೋಡಿಸುವಿಕೆ ಅತ್ಯಂತ ಮಹತ್ವದ್ದಾಗಲಿದೆ. ಸಿನಿಮಾ ಪ್ರೇಮಿಗಳಿಗೆ ಮರೆಯಲಾಗದ ಸಿನಿಮಾ ಅನುಭವವನ್ನು ಕೊಡುವುದು ನಮ್ಮ ಘೋಷಣೆಯಾಗಿದೆ. ವೇದಿಕೆ ಸಜ್ಜಾಗಿದೆ, ಮುಂದಿನ ಹಾದಿ ಮಿತಿಯಿಲ್ಲದ್ದಾಗಿದೆ. ‘ಸಲಾರ್ 2’ ಸಿನಿಮಾದ ಜೊತೆಗೆ ನಮ್ಮ ಈ ಪಯಣ ಪ್ರಾರಂಭ ಆಗಲಿದೆ’ ಎಂದಿದೆ ಹೊಂಬಾಳೆ.
ಈ ಹಿಂದೆ ಹರಿದಾಡಿದ್ದ ಸುದ್ದಿಯ ಪ್ರಕಾರ, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ನಡುವೆ ಅಭಿಪ್ರಾಯ ಬೇದ ಬಂದಿರುವ ಕಾರಣ ‘ಸಲಾರ್ 2’ ಸಿನಿಮಾ ಪ್ರಾರಂಭವೇ ಆಗುವುದಿಲ್ಲ ಎನ್ನಲಾಗಿತ್ತು. ಹೊಂಬಾಳೆ ಸಹ ‘ಸಲಾರ್ 2’ ಸಿನಿಮಾದಿಂದ ಹಿಂದೆ ಸರಿದಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ, ಒಂದೇ ಬಾರಿ ಮೂರು ಸಿನಿಮಾದ ಒಪ್ಪಂದವನ್ನು ಪ್ರಭಾಸ್ ಜೊತೆಗೆ ಹೊಂಬಾಳೆ ಮಾಡಿಕೊಂಡಿದೆ. ಈ ಒಪ್ಪಂದದ ಒಟ್ಟು ಮೊತ್ತ ಎಷ್ಟು? ಷರತ್ತುಗಳೇನು? ಇನ್ನಿತರೆ ವಿಷಯಗಳು ಇನ್ನಷ್ಟೆ ಹೊರಬೀಳಬೇಕಿದೆ.
ಸದ್ಯ ಪ್ರಭಾಸ್ ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಾಜಾ ಸಾಬ್’ ಹೆಸರಿನ ಹಾರರ್ ಸಿನಿಮಾ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದಾದ ಬಳಿಕ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ‘ಸಲಾರ್ 2’ ಚಿತ್ರೀಕರಣ ಪ್ರಾರಂಭ ಆಗಲಿದೆ.