ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಲಾರೆನ್ಸ್ ಗ್ಯಾಂಗ್ ನಿಂದ ಮತ್ತೆ ಮತ್ತೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ. ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂಗೆ ಸಲ್ಮಾನ್ ಗೆ ಬೆದರಿಕೆ ಸಂದೇಶ ಬಂದಿದೆ. ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಕರೆ ಬಂದಿದ್ದು ಬೆದರಿಕೆ ಹಾಕಿರುವ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಮುಂಬಯಿ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ ಸಂದೇಶ ರವಾನೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು, ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಅಪರಿಚಿತ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
‘ಸಲ್ಮಾನ್ ಖಾನ್ಗೆ ಸಂಬಂಧಿಸಿದ ಹಾಡೊಂದರಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಉಲ್ಲೇಖವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಗೀತರಚನೆಕಾರರು ಒಂದು ತಿಂಗಳೊಳಗೆ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ. ಹಾಗೂ, ಮುಂದಿನ ದಿನಗಳಲ್ಲಿ ಹಾಡು ಬರೆಯಲು ಸಾಧ್ಯವಾಗುವುದಿಲ್ಲ. ಸಲ್ಮಾನ್ ಖಾನ್ಗೆ ಧೈರ್ಯವಿದ್ದರೆ ಅವರನ್ನು ಉಳಿಸಲಿ’ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಕೃಷ್ಣಮೃಗ ಹತ್ಯೆಗೈದ ಘಟನೆಗೆ ಸಂಬಂಧಿಸಿ ಸಲ್ಮಾನ್ ಖಾನ್ ನಮ್ಮ (ಬಿಷ್ಣೋಯ್ ಸಮುದಾಯದ) ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಬೇಕು. ಅಥವಾ ಅಥವಾ 5 ಕೋಟಿ ರೂ. ನೀಡಬೇಕು. ತಪ್ಪಿದರೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು. ನಮ್ಮ ಗ್ಯಾಂಗ್ ಇನ್ನೂ ಸಕ್ರೀಯವಾಗಿದೆ’ ಎಂದು ಸೋಮವಾರ ತಡರಾತ್ರಿ (ನ.4) ವರ್ಲಿ ಪ್ರದೇಶದಲ್ಲಿರುವ ಮುಂಬಯಿ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿ ಸಂದೇಶ ರವಾನೆಯಾಗಿತ್ತು. ಸದ್ಯ ಸಲ್ಮಾನ್ ಖಾನ್ ಗೆ ಒಂದರ ಹಿಂದೊದರಂತೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ನಟನಿಗೆ ಬಿಗಿ ಪೊಲೀಸ್ ಬಂಧೋಬಸ್ತ್ ಒದಗಿಸಿದ್ದಾರೆ.