ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದು, ದೇಶವನ್ನು ಸುಭದ್ರಗೊಳಿಸಲು ಬೇಕಾದ ಎಲ್ಲವನ್ನೂ ಮಾಡುತ್ತೇನೆ ಎಂದು ಹೇಳಿದರು. ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ಘೋಷಣೆಯನ್ನು ಪುನರುಚ್ಚರಿಸಿದ ಡೊನಾಲ್ಡ್ ಟ್ರಂಪ್, ನಾನು ಪ್ರತಿ ಕ್ಷಣವೂ ಅಮೆರಿಕಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಡೆಮಕ್ರಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಪೆಲೋಸಿ ಕ್ಯಾಲಿಫೋರ್ನಿಯಾದಲ್ಲಿ ದಾಖಲೆಯ ಸತತ 20ನೇ ಬಾರಿ ಗೆದ್ದು ಬೀಗಿದ್ದಾರೆ. ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಸೆನೆಟ್ ಮೇಲೆಯೂ ಹಿಡಿತ ಸಾಧಿಸಿದೆ. ಬಹುಮತನಕ್ಕೆ ಅಗತ್ಯವಾದ ಸೀಟುಗಳು ಲಭಿಸಿವೆ. 100 ಸ್ಥಾನಗಳ ಸೆನಟ್ನಲ್ಲಿ 34 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಭಾರತಕ್ಕೇನು ಲಾಭ?
ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಉತ್ತಮ ಸ್ನೇಹಿತರಾಗಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲೂ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದರು. ಹೀಗಾಗಿ ಭಾರತ-ಅಮೆರಿಕ ಸಂಬಂಧಕ್ಕೆ ಇನ್ನಷ್ಟು ಬಲ ಸಿಗಲಿದೆ.
ಕೆನಡಾದಲ್ಲಿ ಮಾಡುತ್ತಿರುವ ಖಲಿಸ್ತಾನಿಗಳ ಆಟಾಟೋಪಕ್ಕೆ ಬ್ರೇಕ್ ಬೀಳುವ ಸಾಧ್ಯತೆ. ಮೊದಲ ಅವಧಿಯಲ್ಲಿ ಟ್ರಂಪ್ ಚೀನಾದ ಕಡು ವಿರೋಧಿಯಾಗಿದ್ದರು. ಈ ಕಾರಣ ಭಾರತದ ಉತ್ಪಾದನಾ ವಲಯದ ಮೇಲೆ ಅಮೆರಿಕ ಹೆಚ್ಚು ಪ್ರಭಾವ ಬೀರುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ.
ತಮ್ಮ ಪ್ರಚಾರದಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುತ್ತೇನೆ ಎಂದು ಹೇಳಿದ್ದರು. ಇದು ಪರೋಕ್ಷವಾಗಿ ಇದು ಭಾರತಕ್ಕೆ ಅನುಕೂಲವಾಗಲಿದೆ. ಇಂಧನ ಬೆಲೆಯಲ್ಲಿ ಕೊಂಚ ಇಳಿಕೆ ಆಗಬಹುದು. ಇದಕ್ಕೆ ಪೂರಕ ಎಂಬಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿದೆ.
ಟ್ರಂಪ್ ಜತೆಗೆ ಬಾಹ್ಯಾಕಾಶ ಉದ್ಯಮಿ ಎಲಾನ್ ಮಸ್ಕ್ ಕೂಡ ಪರೋಕ್ಷವಾಗಿ ಅಮೆರಿಕದ ಸರಕಾರದ ಭಾಗವೇ ಆಗುತ್ತಿರುವುದು ಭಾರತಕ್ಕೆ ವರದಾನವೂ ಹೌದು. ಗಗನಯಾನ, ಬಾಹ್ಯಾಕಾಶ ನಿಲ್ದಾಣ ನಿರ್ಮಾಣದಂಥ ಇಸ್ರೊದ ಬೃಹತ್ ಕನಸುಗಳಿಗೆ ಅಮೆರಿಕದ ಬಾಹ್ಯಾಕಾಶ ತಾಂತ್ರಿಕ ನೆರವು ಅಗತ್ಯವಾಗಿ ಸಿಗುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಬಹುದು. ಹೊಸದಿಲ್ಲಿಗೆ ಟ್ರಂಪ್ ಸಖ್ಯ ಸಿಹಿಯಾಗಿರಲಿ.
ಬಹಳ ಮುಖ್ಯವಾಗಿ ಅಮೆರಿಕಕ್ಕೆ ತೆರಳಿ ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತಿದ್ದ ಭಾರತೀಯರಿಗೆ ವೀಸಾ ಸಿಗುವುದು ಕಷ್ಟವಾಗಬಹುದು. ವಲಸೆ ನೀತಿಯನ್ನು ನಾನು ಬಿಗಿಗೊಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು. ಅಷ್ಟೇ ಅಲ್ಲದೇ ಅಮೆರಿಕದವರಿಗೆ ಉದ್ಯೋಗ ನೀಡುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಅಮೆರಿಕಕ್ಕೆ ಜನ ಉದ್ಯೋಗಕ್ಕೆ ತೆರಳದೇ ಇದ್ದರೂ ಹೊರಗುತ್ತಿಗೆ ಕೆಲಸ ಜಾಸ್ತಿಯಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.