ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಓಹಾಯೋ ಸೆನೆಟರ್ J.D.ವ್ಯಾನ್ಸ್ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷ J.D.ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಇದೀಗ ಅಮೆರಿಕಾದ ದ್ವಿತೀಯ ಮಹಿಳೆ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಅಮೆರಿಕಾದ ದ್ವಿತೀಯ ಮಹಿಳೆಯ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯೂ ಉಷಾ ಚಿಲುಕುರಿ ಪಾಲಾಗಿದೆ.
ಉಷಾ ಚಿಲುಕುರಿ ವ್ಯಾನ್ಸ್ ಅವರ ಪೋಷಕರು 1970ರಲ್ಲಿ ಅಮೆರಿಕಾಗೆ ತೆರಳಿದ್ದರು. ಉಷಾ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದಿದ್ದರು. ಉಷಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಚಿಲುಕುರಿ ಅವರು ಈ ಮೊದಲು ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಬಳಿಕ ರಿಪಬ್ಲಿಕ್ ಪಕ್ಷ ಸೇರಿಕೊಂಡು, ಪತಿಯ ಪರವಾಗಿ ಸೆನೆಟರ್ ಚುನಾವಣೆಯಲ್ಲಿ ಪ್ರಚಾರ ಕೂಡ ನಡೆಸಿದ್ದರು. ಸದ್ಯ ಅವರ ಕುಟುಂಬವು ಓಹಿಯೋದ ಸಿನ್ಸಿನಾಟಿಯಲ್ಲಿ ನೆಲೆಸಿದೆ.
ಜೆಡಿ ವ್ಯಾನ್ಸ್ ಭಾರತೀಯ ಮೂಲದ ವಕೀಲೆ ಉಷಾ ಚಿಲುಕುರಿ ವ್ಯಾನ್ಸ್ ಅವರನ್ನು ವಿವಾಹವಾಗಿದ್ದಾರೆ. ಯೇಲ್ನಲ್ಲಿ ಸಹಪಾಠಿಯಾಗಿದ್ದ ಉಷಾ, ಅಲ್ಲಿ ಸಭೆಗಳನ್ನು ಆಯೋಜಿಸಲು ವ್ಯಾನ್ಸ್ಗೆ ಸಹಾಯ ಮಾಡಿದರು. ಈ ಸಮಯದಲ್ಲಿ, ಇಬ್ಬರೂ ಹತ್ತಿರವಾಗಿದ್ದು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ದಂಪತಿಗಳು ಅಂತಿಮವಾಗಿ 2014ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಹಿಂದೂ ಪಂಡಿತರೊಬ್ಬರು ವಿವಾಹವನ್ನು ನೆರವೇರಿಸಿದ್ದರು ಎಂದು ಹೇಳಲಾಗುತ್ತದೆ. ಈ ದಂಪತಿಗೆ ಐವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳಿದ್ದಾರೆ.
ಆಂಧ್ರಪ್ರದೇಶದ ವಡ್ಲೂರು ಎಂಬ ಸಣ್ಣ ಹಳ್ಳಿಯ ನಿವಾಸಿಗಳು ಟ್ರಂಪ್ ಗೆದ್ದ ನಂತರ ಹರ್ಷ ವ್ಯಕ್ತಪಡಿಸಿದ್ದಾರೆ. ಶ್ವೇತಭವನದಿಂದ 13,450 ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿದ್ದರೂ, ನಿವಾಸಿಗಳು ಹೆಮ್ಮೆಯಿಂದ ‘ನಾವು ಟ್ರಂಪ್ ಅನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದ್ದಾರೆ.