ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ನಗು ಬೀರಿದ್ದಾರೆ. ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿರುವ ಟ್ರಂಪ್ ಗೆಲುವಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ನಾಯಕರು ಶುಭ ಹಾರೈಸಿದ್ದಾರೆ.
ಈ ನಡುವೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕಳೆದ 5 ಅಧ್ಯಕ್ಷೀಯ ಅವಧಿಗಳಲ್ಲಿ ಭಾರತವು ಯುನೈಟೆಡ್ ಸ್ಟೇಟ್ನೊಂದಿಗಿನ ತನ್ನ ಸಂಬಂಧದಲ್ಲಿ ಸ್ಥಿರವಾದ ಪ್ರಗತಿಯನ್ನು ಕಂಡಿದೆ. ಚುನಾವಣೆಯ ಬಳಿಕ ಅಮೆರಿಕದೊಂದಿಗಿನ ಭಾರತದ ಸಂಬಂಧವು ಮತ್ತಷ್ಟು ಬಲಗೊಳ್ಳಲಿದೆ ಎಂದಿದ್ದಾರೆ.
ಕ್ಯಾನ್ಬೆರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕನ್ನರು ಇನ್ನೂ ಮತ ಚಲಾಯಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಭಾರತದ ಕೇಂದ್ರ ಸಚಿವ ಜೈಶಂಕರ್, ಅಮೆರಿಕದೊಂದಿಗೆ ಭಾರತದ ಸಂಬಂಧ ಭವಿಷ್ಯದಲ್ಲಿ ಇನ್ನೂ ಬೆಳೆಯಲಿದೆ ಎಂದು ಹೇಳಿದ್ದಾರೆ. ಕ್ಯಾನ್ಬೆರಾದಲ್ಲಿ ಆಸ್ಟ್ರೇಲಿಯಾದ ಸಹವರ್ತಿ ಪೆನ್ನಿ ವಾಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಜೈಶಂಕರ್ ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ಗಳನ್ನು ಒಳಗೊಂಡಿರುವ ಕ್ವಾಡ್ನ ಭವಿಷ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.
ರಿಪಬ್ಲಿಕನ್ ನಾಯಕ ಮತ್ತು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಕಾಳಜಿ ಇದೆಯೇ ಮತ್ತು ಅವರ ಅಧ್ಯಕ್ಷತೆಯಲ್ಲಿ ಕ್ವಾಡ್ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಇಬ್ಬರು ಸಚಿವರನ್ನು ಕೇಳಲಾಯಿತು.
ಸಚಿವ ಜೈಶಂಕರ್ ಸುದ್ದಿಗಾರರೊಂದಿಗೆ ಮಾತನಾಡಿ, “ಹಿಂದಿನ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆ ಸೇರಿದಂತೆ ಕಳೆದ ಐದು ಅಧ್ಯಕ್ಷರ ಅವಧಿಗಳಲ್ಲಿ ನಾವು ಯುಎಸ್ ಜೊತೆಗಿನ ನಮ್ಮ ಸಂಬಂಧದಲ್ಲಿ ಸ್ಥಿರವಾದ ಪ್ರಗತಿಯನ್ನು ಕಂಡಿದ್ದೇವೆ. ಹಾಗಾಗಿ, ನಾವು ಅಮೆರಿಕದ ಚುನಾವಣೆಯನ್ನು ನೋಡಿದಾಗ, ತೀರ್ಪು ಏನೇ ಇರಲಿ, ನಮ್ಮ ಸಂಬಂಧದ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ. ಯುನೈಟೆಡ್ ಸ್ಟೇಟ್ನೊಂದಿಗೆ ನಮ್ಮ ದೇಶದ ಸಂಬಂಧ ಬೆಳೆಯುತ್ತದೆ” ಎಂದಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಎದುರಿಸಲು “ಕ್ವಾಡ್” ಅಥವಾ ಚತುರ್ಭುಜ ಒಕ್ಕೂಟವನ್ನು ಸ್ಥಾಪಿಸುವ ದೀರ್ಘಾವಧಿಯ ಪ್ರಸ್ತಾಪಕ್ಕೆ ಯುಎಸ್, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ 2017ರಲ್ಲಿ ರೂಪು ನೀಡಿದ್ದವು.