ಮಹದೇವಪುರ: ಕ್ಷೇತ್ರದ ಬಿದರಹಳ್ಳಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಶಿಖರದ ಕಲಶ ಪ್ರತಿಷ್ಠಾಪನಾ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳ ಅರವಿಂದ ಲಿಂಬಾವಳಿಯವರು ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೂಜಾ ಕೈಂಕರ್ಯಗಳು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆದಿದ್ದು,ಬಿದರಹಳ್ಳಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಬಂದಿದ್ದ ಭಕ್ತರಿಗೆ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿಯವರು, ಸನಾತನ ಧರ್ಮವೆಂಬುದು ಭಾರತದ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಕ್ಷೇತ್ರದ ಬಿದರಹಳ್ಳಿಯಲ್ಲಿ 700 ವರ್ಷಗಳ ಇತಿಹಾಸವಿರುವ ನೂತನವಾಗಿ ಜೀರ್ಣೋದ್ದಾರಗೊಂಡ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಶಿಖರದ ಕಲಶ ಪ್ರತಿಷ್ಟಾಪನಾ, ಹಾಗೂ ಕುಂಭಾಬಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಕೆಲವು ದುಷ್ಟಶಕ್ತಿಗಳು ಸನಾತನ ಧರ್ಮ ಸಂಸ್ಕೃತಿಯನ್ನು ಹಾಳುಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ, ಆದರೇ ಅದು ಯಶಸ್ವಿಯಾಗುವುದಿಲ್ಲ, ವಿಶ್ವ ಪರಂಪರೆಯಲ್ಲಿ ಸನಾತನ ಧರ್ಮಕ್ಕೆ ವಿಶಿಷ್ಟ ಸ್ಥಾನವಿದ್ದು ಅದನ್ನು ದೈವ ಕಾಯುತ್ತಿದೆ, ಇದಕ್ಕೆ ವಿರುದ್ದವಾಗಿ ಹೋದರೇ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂದರು.
ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಬಿದರಹಳ್ಳಿಯ ದೇವಾಲಯವನ್ನು ಮೂರನೇ ಬಾರಿಗೆ ಜೀರ್ಣೊದ್ದಾರ ಗೊಳಿಸಲಾಗಿದೆ. ಅದ್ಬುತ ಕಲಾಕೃತಿಗಳೊಂದಿಗೆ ದೇವಾಲಯವು ಮಿನುಗುತ್ತಿದ್ದು, ತಡ ರಾತ್ರಿಯಿಂದಲೇ ವಿವಿಧ ಅಲಂಕಾರ ಗೊಂಡು ವಿಶ್ವನಾಥ ನಿಗೆ ವಿಶೇಷ ಪೂಜೆಗಳು ನಡೆದವು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತಾಧಿಗಳಿಗೆ ಅನ್ನಪ್ರಸಾದ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಅರವಿಂದಲಿಂಬಾವಳಿ, ದೇವಾಲಯದ ಟ್ರಸ್ಟ್ ಅಧ್ಯಕ್ಷ ಬಿ.ಎನ್ .ನಟರಾಜ್ , ಬಿ.ಜಿ.ರಾಜೇಶ್, ಮಧು ಕುಮಾರ್ , ಬಿ.ವಿ.ವರುಣ್, ಚಂದ್ರಶೇಖರ್, ಸುನಿಲ್ ಕುಮಾರ್ , ಗಣೇಶ್ ಮತ್ತು ಗ್ರಾಮಸ್ಥರು ಇದ್ದರು