ಬೆಂಗಳೂರು: ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನೂ ಗುರುಪ್ರಸಾದ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಗುರುಪ್ರಸಾದ್ ಪ್ರತಿಭಾನ್ವಿತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ರೀತಿಯಲ್ಲಿ ಕೆಲಸ ಮಾಡಿದ್ದ. ಮಠ ಸಿನಿಮಾ ಮಾಡುವ ಪ್ರತಿ ದೃಶ್ಯವನ್ನು ಅಭಿನಯಿಸಿ ತೋರಿಸಿದ್ದ. ಆದರೆ ಯಶಸ್ಸಿನ ಬಳಿಕ ಬೆಳೆಸಿಕೊಂಡ ಚಟಗಳೇ ಆತನಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ. ತಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ಸಿನಿಮಾದಲ್ಲಿ ವಿಪರೀತ ಡಬಲ್ ಮೀನಿಂಗ್ ಡೈಲಾಗ್ ಹಾಕುತ್ತಿದ್ದ. ಡಬಲ್ ಮೀನಿಂಗ್ ಡೈಲಾಗ್ ಬಳಸಬೇಡ ಎಂದು ಸಲಹೆ ನೀಡಿದ್ದೆ. ಅದಕ್ಕೆ ಆತ ನನ್ನ ವಿರುದ್ಧವೇ ಅಪಪ್ರಚಾರ ಮಾಡಿ ಜಗ್ಗೇಶ್ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ. ಇದರಿಂದ ನನಗೆ ಅಂದು ಬಹಳ ಬೇಸರವಾಗಿ ನಾನು ಕಣ್ಣೀರು ಹಾಕಿದ್ದೆ ಎಂದು ತಿಳಿಸಿದರು.
ಸಿನಿಮಾ ಹಿಟ್ ಆದ ನಂತರ ಸೋಲಲು ಆರಂಭವಾಯಿತು. ಈ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಆತನ ಬಳಿ ಇರಲಿಲ್ಲ. ಸೋಲುಗಳಿಂದ ಪಾಠ ಕಲಿಯುವ ಮನಸ್ಥಿತಿ ಇರಲಿಲ್ಲ. ಕುಡಿತದ ಚಟಕ್ಕೆ ಬಿದ್ದಿದ್ದ. ತನ್ನ ತಾಯಿಯನ್ನೇ ತುಚ್ಛವಾಗಿ ನಿಂದಿಸುತ್ತಿದ್ದ ಎಂದು ಹೇಳಿದರು. ಗುರುಪ್ರಸಾದ್ ಅವರು ಎರಡು ಮದುವೆಯಾಗಿದ್ದ. ಮೊದಲ ಪತ್ನಿ ರಾಷ್ಟ್ರಮಟ್ಟದ ಯೋಗ ಪಟು ಆಗಿದ್ದರು.
ಆದರೆ ಹಲವಾರು ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ದಂಪತಿ ದೂರವಾಗುವ ಮುನ್ನ ನಾನೇ ಹಲವು ಬಾರಿ ರಾಜಿ ಮಾತುಕತೆ ನಡೆಸಿ ಇಬ್ಬರನ್ನು ಒಂದು ಮಾಡಲು ಪ್ರಯತ್ನಿಸಿದ್ದೆ. ನಂತರ ಗುರುಪ್ರಸಾದ್ ಮತ್ತೊಂದು ಮದುವೆಯಾದ. ಈಗ ಆತ ಒಂಟಿಯಾಗಿದ್ದಾನೆ ಎಂಬ ಸುದ್ದಿ ಬರುತ್ತಿದೆ. ಈಗ ಆ ಪತ್ನಿಯೂ ಆತನಿಂದ ದೂರವಾಗಿರಬಬಹುದು ಎಂದು ಅನಿಸುತ್ತಿದೆ. ಒಂಟಿತನದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜಗ್ಗೇಶ್ ಅನುಮಾನ ವ್ಯಕ್ತಪಡಿಸಿದರು.