ಬೆಳಗಾವಿ: ನಗರದ ಪ್ರತಿಯೊಂದು ಬೀದಿಯಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿತ್ತು. ಆದರೆ ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ MES ಸಂಘಟನೆ ಕರಾಳ ದಿನ ಆಚರಣೆ ಮಾಡಿದ್ದಾರೆ. ಹೌದು ನವೆಂಬರ್ 1ರಂದು ‘ಕರಾಳ ದಿನ’ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿದ ಬಳಿಕವೂ ನಗರದಲ್ಲಿ ಬೃಹತ್ ‘ಕರಾಳ ದಿನ’ ರ್ಯಾಲಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗವಿಸಿದ ಎಲ್ಲರ ವಿರುದ್ಧವೂ ದೂರು ದಾಖಲಾಗಿದೆ.
ಮಹರಾಷ್ಟ್ರ ಏಕೀಕರಣ ಸಮಿತಿಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಜಿ ಶಾಸಕ ಮನೋಹರ ಕಿಣೇಕರ, ಎಮ್ಇಡಿ ಮುಖಂಡ ಶುಭಂ ಶಳಕೆ, ರಮಾಕಾಂತ ಕೊಂಡುಸ್ಕರ, ವಿಕಾಸ ಕಲಘಟಗಿ ಶಿವಸೇನೆ ಮುಖಂಡ ಪ್ರಕಾಶ ಮರಗಾಳೆ ಸೇರಿದಂತೆ 46 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?
ಎಂಇಎಸ್ ಕಾರ್ಯಕರ್ತರು ನವೆಂಬರ್ 1ರಂದು ಜಿಲ್ಲಾಡಳಿತ ಅನುಮತಿ ಇಲ್ಲದೇ ಕರಾಳ ದಿನ ಮೆರವಣಿಗೆ ಮಾಡಿದ್ದರು. ನಗರದ ಧರ್ಮವೀರ ಸಂಭಾಜಿ ಮೈದಾನದಿಂದ ಮರಾಠಾ ಮಂದಿರವರೆಗೂ ಮೆರವಣಿಗೆ ಮಾಡಿದ್ದರು. ಎಂಇಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಭೌಮತ್ವ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು. ಮಹಾರಾಷ್ಟ್ರ ಸರ್ಕಾರದ ಪರವಾಗಿ ಘೋಷಣೆ ಕೂಗಿದ್ದರು.
ಕಾರ್ಯಕರ್ತರು ಬೆಳಗಾವಿ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರ ಸೇರಿಸುವಂತೆ ನಾಡದ್ರೋಹಿ ಘೋಷಣೆ ಹಾಕಿದ್ದರು. ಸಾರ್ವಜನಿಕವಾಗಿ ಶಾಂತಿ ಭಂಗ, ನಗರದಲ್ಲಿ ದೊಂಬಿ ಎಬ್ಬಿಸಲು ಪ್ರಚೋದನೆ, ಅಕ್ರಮವಾಗಿ ಕೂಟ ಸೇರಿ ಸಭೆ ನಡೆಸಿದಕ್ಕೆ ಬಿಎನ್ಎಸ್ ಕಾಯ್ದೆ 189(2),192, 292, 285, 190 ಕಲಂ ಅಡಿ ಪ್ರಕರಣ ದಾಖಲಾಗಿದೆ. ಮಾರ್ಕೆಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.