ಬೆಂಗಳೂರು:- ದೇಶದ ಪ್ರಧಾನಿಯಾಗಿ “ಪುಡಾರಿ” ರೀತಿ ರೀತಿ ಸುಳ್ಳು ಹೇಳುವುದು ವಿಷಾದನೀಯ ಎಂದು ಹೇಳುವ ಮೂಲಕ PM ಮೋದಿಗೆ CM ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಸರ್ಕಾರದ ಎಡವಟ್ಟು: ಸುವರ್ಣ ಮಹೋತ್ಸವ ಪ್ರಶಸ್ತಿಗಾಗಿ ಬಂದು ಬರಿಗೈಲಿ ವಾಪಸ್ ಆದ ಸಮಾಜ ಸೇವಕ!
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಪ್ರಧಾನಿ ಮೋದಿಗೆ X ನಲ್ಲೇ ಟಾಂಗ್ ಕೊಟ್ಟಿರುವ ಸಿದ್ದು, ಈ ಮೇಲಿನ ಹೇಳಿಕೆಯನ್ನು ಉಲ್ಲೇಖ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದಿದ್ದಾರೆ.
ಪ್ರಧಾನಿ ಮೋದಿ ಅವರೇ, ಇಂದು ಕನ್ನಡ ರಾಜ್ಯೋತ್ಸವದ ದಿನ. “ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಎಂದು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಕಾವ್ಯವನ್ನು ನಾಡಗೀತೆಯಾಗಿ ಸ್ವೀಕರಿಸಿರುವ ಕರ್ನಾಟಕ, ಭಾರತಕ್ಕೆ ತಾಯಿಯ ಸ್ಥಾನವನ್ನು ನೀಡಿದೆ. ಇದೇ ಪ್ರೀತಿ ಮತ್ತು ಬದ್ಧತೆಯಿಂದ ಪ್ರಾಮಾಣಿಕವಾಗಿ ತಮ್ಮ ಬೆವರಗಳಿಕೆಯನ್ನು ತೆರಿಗೆಯಾಗಿ ನೀಡಿ ದೇಶದ ಬೊಕ್ಕಸವನ್ನು ತುಂಬಿದವರು ಕನ್ನಡಿಗರು.
ದೇಶದಲ್ಲಿ ಮಹಾರಾಷ್ಟ್ರದ ನಂತರ ಅತ್ಯಂತ ಹೆಚ್ಚು ನೇರ ತೆರಿಗೆ ಪಾವತಿಯಾಗಿರುವುದು ಕರ್ನಾಟಕ ರಾಜ್ಯದಲ್ಲಿ ಎನ್ನುವುದನ್ನು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ಒಪ್ಪಿಕೊಂಡಿರುವುದನ್ನು ನೀವು ಗಮನಿಸಿರಬಹುದೆಂದು ಭಾವಿಸಿದ್ದೇನೆ. ನರೇಂದ್ರ ಮೋದಿಯವರೇ, ಎಲ್ಲವನ್ನೂ ಪಕ್ಷ, ರಾಜಕೀಯದ ಹಳದಿ ಕನ್ನಡಕದಿಂದ ನೋಡುವ ಅಭ್ಯಾಸವನ್ನು ಬಿಟ್ಟು ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ ಕರ್ನಾಟಕದ ಅಭಿವೃದ್ದಿ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಬಡವರ ಕೈಗೆ ದುಡ್ಡು ಸಿಕ್ಕಿ ಅದು ಮಾರುಕಟ್ಟೆಗೆ ಹರಿದುಬಂದು ಅದರಿಂದ ತೆರಿಗೆ ಸಂಗ್ರಹವೂ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಬಲ ಬರಲಿದೆ ಎಂದು ಪ್ರಾರಂಭದಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಅದು ಇಂದು ನಿಜವಾಗಿದೆ. ಇದಕ್ಕಾಗಿ ಕರ್ನಾಟಕಕ್ಕೆ ನೀವು ಶಹಾಬಾಸ್ ಗಿರಿ ಕೊಡಬೇಕಿತ್ತು, ಆದರೆ ನೀವು ಸುಳ್ಳಿನ ಬಾಣಗಳ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದ್ದೀರಿ. ಇದು ಖಂಡನೀಯ, ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸಾಧನೆ ಏನು? ಏಳು ಕೋಟಿ ಕನ್ನಡಿಗರ ಅಭಿವೃದ್ಧಿಗಾಗಿ ವ್ಯಯವಾಗಬೇಕಾಗಿದ್ದ ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು 40% ಕಮಿಷನ್ ರೂಪದಲ್ಲಿ ತಿಂದು ತೇಗಿದ್ದೇ? ಆದಾಯದ ಮೂಲಗಳನ್ನೆಲ್ಲ ಬರಿದು ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಳ್ಳಿದ್ದೇ? ಈ ರೀತಿ ಲೂಟಿ ಮಾಡಿದ್ದ ಹಣದಲ್ಲಿ ನಿಮಗೂ ಪಾಲು ಸಂದಾಯವಾಗಿದೆ ಎಂದು ನಿಮ್ಮ ಪಕ್ಷದ ನಾಯಕರೇ ಮಾಡಿರುವ ಆರೋಪ ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ? ನಿಮ್ಮ ನಾಯಕರು ಲೂಟಿ ಮಾಡುತ್ತಿದ್ದ 40% ಕಮಿಷನ್ ಹಣವನ್ನು ನಾವು ನೇರವಾಗಿ ಜನರಿಗೆ ತಲುಪಿಸುತ್ತಿದ್ದೇವೆ ಎಂದು ವಾಗ್ದಾಳಿ ಮಾಡಿದ್ದಾರೆ.
ನಾವು ನುಡಿದಂತೆ ನಡೆದಿದ್ದೇವೆ, ನಿಮ್ಮ ಭರವಸೆಗಳೇನಾಯಿತು? ಪ್ರತಿಯೊಬ್ಬನ ಖಾತೆಗೆ ಹದಿನೈದು ಲಕ್ಷ ರೂಪಾಯಿ ಜಮೆ ಆಯಿತೇ? ಕಪ್ಪು ಹಣ ಮಾಯವಾಯಿತೇ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಯಿತೇ? ರೈತರ ಆದಾಯ ದುಪ್ಪಟ್ಟಾಯಿತೇ? ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ? ಎಲ್ಲಿದೆ ನಿಮ್ಮ ಮೇಕ್ ಇನ್ ಇಂಡಿಯಾ? ನಿಮ್ಮ ಸಾಧನೆಗಳಾದರೂ ಏನು? ನಾಡನ್ನು ಸಾಲದ ಕೂಪಕ್ಕೆ ತಳ್ಳಿದ್ದೆ? ಸುಳ್ಳು ಮತ್ತು ಅಪಪ್ರಚಾರದ ಮೂಲಕ ನಿಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿದ್ದೇ ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.