ಹುಬ್ಬಳ್ಳಿ: ‘ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಅಭಿನಯ ಭಾರತಿ ಧಾರವಾಡದ ಸಹಯೋಗದಲ್ಲಿ ಅ.27ರಂದು ಸಂಜೆ 5ಗಂಟೆಗೆ ಗೋಕುಲ ರಸ್ತೆ ಲೂತಿಮಠ ಲೇಔಟ್ನ ಹವ್ಯಕ ಭವನದಲ್ಲಿ ‘ಕಾಲಚಕ್ರ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಅಭಿನಯ ಭಾರತಿ ಧಾರಾವಾಡದ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ‘ಎರಡಂಕದ ಈ ಸಾಮಾಜಿಕ ನಾಟಕದಲ್ಲಿ ಮಂಚಿಕೇರಿಯ ರಂಗ ಸಮೂಹ ಸಂಸ್ಥೆಯ ಕಲಾವಿದರು ಅಭಿನಯಿಸಲಿದ್ದಾರೆ. ಪ್ರಸಿದ್ಧ ಲೇಖಕ ಜಯವಂತ ದಳವಿ ಅವರು ಮರಾಠಿಯಲ್ಲಿ ಬರೆದ ಈ ನಾಟಕವನ್ನು ಎಚ್.ಕೆ. ಕರ್ಕೇರಾ ಕನ್ನಡಕ್ಕೆ ಅನು ವಾದಿಸಿದ್ದಾರೆ. ಹುಲುಗಪ್ಪ ಕಟ್ಟಿಮನಿ ಅವರ ವಿನ್ಯಾಸ ಮತ್ತು ನಿರ್ದೇಶನ ನಾಟಕಕ್ಕಿದೆ. ಸಾಲಿಯಾನ್ ಉಮೇಶ ನಾರಾಯಣ ಅವರು ಸಹ ನಿರ್ದೇಶನ ಮಾಡಿದ್ದಾರೆ’ ಎಂದು ಹೇಳಿದರು.
ಇದು ಕೌಟುಂಬಿಕ ನಾಟಕವಾಗಿದ್ದು, ಇಂದಿನ ಕುಟುಂಬ ವ್ಯವಸ್ಥೆಯನ್ನು ಪ್ರಸ್ತುತ ಸಾಮಾಜಿಕ ಬದುಕಿನ ಸನ್ನಿವೇಶ ಹಾಗೂ ವೃದ್ಧಾಪ್ಯದ ಸಮೀಕರಣವನ್ನು ನಾಟಕದಲ್ಲಿ ಸಮರ್ಥವಾಗಿ ಕಟ್ಟಿ ಕೊಡಲಾಗಿದೆ’ ಎಂದರು.
ನಾಟಕ ಪ್ರದರ್ಶನವನ್ನು ಸಂಸ್ಕಾರ ಶಾಲೆಯ ಚೇರ್ಮನ್ ಮಹೇಂದ್ರ ಸಿಂಘಿ ಉದ್ಘಾಟಿಸಲಿದ್ದಾರೆ. ಹವ್ಯಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಚಿಕೇರಿ ರಂಗ ಸಮೂಹದ ಆರ್.ಎನ್.ಭಟ್ ದುಂಡಿ, ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಬಂಡು ಕುಲಕರ್ಣಿ ಸೇರಿ ಇತರರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಮೊದಲ ಸಲ ನಾಟಕ ಪ್ರದರ್ಶನ ಆಯೋ ಜಿಸಲಾಗಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ಇದೆ’ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ ತಿಳಿಸಿದರು.