ಬೆಂಗಳೂರು– ಕ್ಷುಲ್ಲಕ ಕಾರಣಕ್ಕಾಗಿ ಕರ್ತವ್ಯ ನಿರತ ಬಿಎಂಟಿಸಿ ಬಸ್ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನ ಮಹದೇವಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಸ್ ನಿರ್ವಾಹಕ ಸಂಗಪ್ಪ ಚಿತ್ತಲಗಿ ಹಲ್ಲೆಗೊಳಾಗಿದ್ದು, ಚಾಲಕ ಬಸವರಾಜ್ ನೀಡಿದ ದೂರಿನ ಮೇರೆಗೆ ಹೇಮಂತ್ ಎಂಬುವನನ್ನ ಬಂಧಿಸಲಾಗಿದೆ. ನಾಗರಭಾವಿಯಲ್ಲಿ ವಾಸವಾಗಿರುವ ಹೇಮಂತ್ ಬಿಕಾಂ ಪದವೀಧರನಾಗಿದ್ದು, ಮಾರತ್ ಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ.
ಹಲ್ಲೆ ಸಂಬಂಧ ಬಿಎಂಟಿಸಿ ಚಾಲಕ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಗಪ್ಪ ಅ.18ರ ಮಧ್ಯಾಹ್ನ ಊಟಕ್ಕಾಗಿ ವಿರಾಮ ಪಡೆದು ಟಿನ್ ಫ್ಯಾಕ್ಟರಿ ಬಳಿ ಬಸ್ ನಿಲ್ಲಿಸಿದ್ದರು. .
ಚಾಲಕರೊಂದಿಗೆ ಬಸ್ ನಲ್ಲಿ ಊಟ ಮಾಡುವಾಗ ಏಕಾಏಕಿ ಆರೋಪಿ ಬಸ್ ಹತ್ತಿ ಕಲ್ಲಿನಿಂದ ಕಂಡಕ್ಟರ್ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ಕಾರ್ಯಪ್ರವೃತ್ತಗೊಂಡು ಕೂಡಲೇ ಆತನನ್ನ ಹಿಂಬಾಲಿಸಿ ಹಿಡಿದುಕೊಂಡು ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಕೆಲ ದಿನಗಳ ಹಿಂದೆ ಪಾಸ್ ತೋರಿಸುವ ವಿಚಾರಕ್ಕಾಗಿ ಕಂಡಕ್ಟರ್ ನೊಂದಿಗೆ ಮಾತಿನ ಚಕಮಕಿ ನಡೆದಿದ್ದರಿಂದ ಹಲ್ಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈತನ ತಂದೆ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ನಿವೃತ್ತಿಯಾಗಿದ್ದರು.