ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಕೃಷ್ಣ ಮೃಗ ಬೇಟೆಯಾಡಿದ ಆರೋಪ ಕೇಳಿ ಬಂದಿದೆ. 1998ರಲ್ಲಿ ಹಮ್ ಸಾಥ್ ಸಾಥ್ ಹೇ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಸೈಫ್ ಅಲಿ ಖಾನ್, ಟಬು ಮತ್ತು ಸೋನಾಲಿ ಬೇಂದ್ರೆ ಅವರು ರಾಜಸ್ಥಾನದ ಹಳ್ಳಿಯೊಂದರಲ್ಲಿ ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಬಂಧಿತರಾಗಿ ಜಾಮೀನು ಪಡೆದಿದ್ದರು. ನಂತರ ಪ್ರಕರಣದ ವಿಚಾರಣೆ ಮುಂದುವರಿದಾಗ, ಭಾಯಿಜಾನ್ಗೆ ಶಿಕ್ಷೆ ವಿಧಿಸಲಾಗಿದ್ದು ಮತ್ತೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ಘಟನೆಯ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಮೇಲೆ ಹಗೆ ಸಾಧಿಸಲು ಶುರು ಮಾಡಿದರು. ಸಲ್ಮಾನ್ ಖಾನ್ ಅವರಿಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಏತನ್ಮಧ್ಯೆ, ನಟನ ವಿಡಿಯೋ ವೈರಲ್ ಆಗುತ್ತಿದೆ, ಅದರಲ್ಲಿ ಸಲ್ಮಾನ್ ತಾನು ಕೃಷ್ಣಮೃಗವನ್ನು ಬೇಟೆಯಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ, ಸಲ್ಮಾನ್ ಖಾನ್ ಅವರ ತಂದೆ ಮತ್ತು ಹಿರಿಯ ಬರಹಗಾರ ಸಲೀಂ ಖಾನ್ ಅವರು ತಮ್ಮ ಮಗನ ಬಗ್ಗೆ ಮಾತನಾಡುತ್ತಾ ಜಿರಳೆಯನ್ನು ಕೊಲ್ಲಲು ಸಾಧ್ಯವಾಗದಿದ್ದರೆ, ಆತ ಕೃಷ್ಣ ಮೃಗವನ್ನು ಹೇಗೆ ಕೊಲ್ಲುತ್ತಾನೆ ಎಂದು ಪ್ರಶ್ನಿಸಿದ್ದರು. ಯಾವುದೇ ಅಪರಾಧ ಮಾಡಿಲ್ಲ ಎಂದಾದಲ್ಲಿ ಯಾಕೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು. ಇದೀಗ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ತಾವು ಕೃಷ್ಣಮೃಗವನ್ನು ಕೊಂದಿಲ್ಲ ಎಂದು ಹೇಳಿದ್ದಾರೆ.
ಅಂದ ಹಾಗೆ ಸದ್ಯ ವೈರಲ್ ಆಗಿರುವ ವಿಡಿಯೋ 2008ರದ್ದು. ಇದನ್ನು ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ನಲ್ಲಿ ಸಂದರ್ಶಕರು ಸಲ್ಮಾನ್ ಅವರನ್ನು ‘ಅಜ್ಞಾನದ ಬಲಿಪಶು’ ಎಂದು ಕರೆಯುತ್ತಾರೆ ಮತ್ತು ಸಲ್ಮಾನ್ ಅಳಿವಿನಂಚಿನಲ್ಲಿರುವ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾರೆ ಎಂದು ತಾನು ಭಾವಿಸುವುದಿಲ್ಲ ಎಂದು ಹೇಳುತ್ತಾರೆ. ಸಲ್ಮಾನ್ ಈ ಬಗ್ಗೆ ಸ್ವಲ್ಪ ಸಮಯ ಯೋಚಿಸಿ ಬಳಿಕ, ‘ಇದೊಂದು ಸುದೀರ್ಘ ಕಥೆ ಮತ್ತು… ನಾನು ಕೃಷ್ಣಮೃಗವನ್ನು ಕೊಂದಿಲ್ಲ’ ಎಂದಿದ್ದಾರೆ.
ಬೇರೆಯವರ ಮೇಲೆ ಆರೋಪ ಹೊರಿಸದೆ, ಎಲ್ಲ ತಪ್ಪನ್ನು ತನ್ನ ಮೇಲೆ ಎಳೆದುಕೊಂಡ ವುಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ, ಇದರಲ್ಲಿ ಬೇರೇನೂ ಅರ್ಥವಿಲ್ಲ ಎಂದಿದ್ದಾರೆ. ಇನ್ನು ಜೈಲಿನ ಅನುಭವದ ಬಗ್ಗೆ ಪ್ರಶ್ನಿಸದಾಗ, ತಮಾಷೆಯಾಗಿ ಉತ್ತರಿಸಿದ ಸಲ್ಲು ಬಹಳ ಮಜವಾಗಿತ್ತು ಎಂದಿದ್ದಾರೆ.