ಕೋಲ್ಕತ್ತಾ: ಕೋಲ್ಕತ್ತಾದ ಇಎಸ್ಐ ಆಸ್ಪತ್ರೆಯಲ್ಲಿ (ESI Hospital) ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಐಸಿಯುನಲ್ಲಿದ್ದ (ICU) ಓರ್ವ ರೋಗಿ ಸಾವನ್ನಪ್ಪಿದ್ದಾನೆ.
ಕೋಲ್ಕತ್ತಾದ ಸೀಲ್ದಾಹ್ (Sealdah) ಪ್ರದೇಶದಲ್ಲಿರುವ ಇಎಸ್ಐ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು (ಅ.18) ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಈ ವೇಳೆ ಕೇವಲ 20 ನಿಮಿಷದಲ್ಲಿ 80 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಮೊದಲು ಆಸ್ಪತ್ರೆಯ ಒಂದು ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೇರೆ ಕೋಣೆಗಳಿಗೆ ಹರಡುವ ಮುನ್ನ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ.
ಕೆಲವು ರೋಗಿಗಳು ಬೆಂಕಿ ಕಾಣಿಸಿಕೊಂಡ ಬಳಿಕ ತಮ್ಮ ಆರೈಕೆದಾರರ ಜೊತೆ ಹೊರಗೆ ಬಂದಿದ್ದು, ಇನ್ನುಳಿದ ಕೆಲವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು. ಸದ್ಯ ಚಿಕಿತ್ಸೆಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.
ಸ್ಥಳಕ್ಕೆ ಪಶ್ಚಿಮ ಬಂಗಾಳದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್ (Sujit Bose) ಭೇಟಿ ನೀಡಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ.ಕೆ.ದತ್ತಾ (TK Dutta) ಮಾತನಾಡಿ, ಇದೊಂದು ಭಯಾನಕ ಅಗ್ನಿ ಅವಘಡ. ಐಸಿಯುನಲ್ಲಿ ದಾಖಲಾಗಿದ್ದ ಓರ್ವ ರೋಗಿಯ ಹೊರತಾಗಿ, ಕೇವಲ 20 ನಿಮಿಷದಲ್ಲಿ ಎಲ್ಲಾ ರೋಗಿಗಳನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಐಸಿಯುನಲ್ಲಿದ್ದ ಓರ್ವ ರೋಗಿಯ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನಿತರ ಯಾವುದೇ ಗಾಯಗಳಾಗಿಲ್ಲ. ಕೋಣೆಯಲ್ಲಿ ಹೊಗೆ ಕಾಣಿಸಿದ್ದನ್ನು ಕಂಡ ಕೆಲ ರೋಗಿಗಳು ಕಿಟಕಿಯಿಂದ `ನಮ್ಮನ್ನು ಉಳಿಸಿ’ ಎಂದು ಕಿರುಚುತ್ತಿದ್ದರು ಎಂದು ನಡೆದ ಅವಘಡದ ಕುರಿತು ವಿವರಿಸಿದರು.